ಕಾಸರಗೋಡು: ಮಂಗಳೂರಿನ ಮನಿ ಚೈನ್ ಸಂಸ್ಥೆಯ ಏಜೆಂಟಾಗಿದ್ದ ಯುವಕನೋರ್ವನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿನಲ್ಲಿ ನಿಗೂಢತೆಯಿರುವ ಬಗ್ಗೆ ಮನೆಯವರು ಹಾಗೂ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮೃತದೇಹವನ್ನು ಪೆರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಗಿದೆ.
ಬಾಯಾರು ಅನಂತ ನಗರದ ಕೃಷ್ಣ ನಾಯಕ್ – ಸರೋಜಾ ದಂಪತಿ ಪುತ್ರ ಗಣೇಶ್ ನಾಯಕ್ (30) ಅವರ ಶವ ಫೆ.13 ರಂದು ಬೆಳಿಗ್ಗೆ ಮನೆ ಸಮೀಪದ ಗುಡ್ಡೆಯೊಂದರ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ. ಸಮೀಪವೇ ಮದ್ಯದ ಬಾಟಲಿ ಪತ್ತೆಯಾಗಿದೆ.
ಗಣೇಶ್ ನಾಯಕ್ ಅವರು ಮಂಗಳೂರಿನ ಮನಿ ಚೈನ್ ಸಂಸ್ಥೆಯೊಂದರ ಏಜೆಂಟಾಗಿ ಕಾರ್ಯ ನಿರ್ವಹಿಸಿ ಹಲವರನ್ನು ಇದರ ಪಾಲುಗಾರರನ್ನಾಗಿ ಮಾಡಿಸಿದ್ದನು. ಈ ಸಂಸ್ಥೆ ಈಗಾಗಲೇ ಮುಳುಗಿದ್ದು, ಸಂಸ್ಥೆಯಲ್ಲಿ ಪಾಲು ಹೊಂದಿದ್ದವರು ಗಣೇಶ್ ನಾಯಕ್ ಅವರಲ್ಲಿ ಹಣ ಮರಳಿಸುವಂತೆ ಒತ್ತಾಯಿಸುತ್ತಿದ್ದರು.
ಈ ನಡುವೆ, ಗಣೇಶ್ ಮಾನಸಿಕವಾಗಿ ತಲ್ಲಣಗೊಂಡಿದ್ದ ಎಂದು ಮನೆಯವರು ಹೇಳುತ್ತಾರೆ. ಫೆ.12 ರಂದು ರಾತ್ರಿ ಗಣೇಶ್ ತಂದೆ ಗಣೇಶ್ ನಿಗೆ ದೂರವಾಣಿ ಕರೆ ಮಾಡಿದಾಗ ಸಂಪರ್ಕಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.

