ಸುದ್ದಿ9 ಮಂಗಳೂರು: ಫೆ.27 ಹಿಂದೂಗಳ ಪಾಲಿಗೆ ಅತ್ಯಂತ ಕ್ರೂರ ದಿನ, ಫೆ.27. 2002ರಂದು ಗುಜರಾತ್ನ ಗೋಧ್ರಾ ರೈಲ್ವೆ ನಿಲ್ದಾಣದ ಹತ್ತಿರ ಸಾಬರಮತಿ ಎಕ್ಸಪ್ರೆಸ್ನಲ್ಲಿ ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ 59 ಶ್ರೀರಾಮಭಕ್ತರನ್ನು ಅತ್ಯಂತ ಕ್ರೂರತೆಯಿಂದ ಸುಟ್ಟು ಕೊಲ್ಲಲಾಯಿತು. ಈ ದಿನವನ್ನು ಹಿಂದೂಗಳ ಮೇಲಾದ ಅತ್ಯಾಚಾರದ ದಿನ ಅಥವಾ `ಕಪ್ಪು ದಿನ’ ಎಂದು ಆಚರಿಸಬೇಕು. ಅಲ್ಲದೆ ಫೆ.14 ವ್ಯಾಲಂಟೈನ್ ದಿನವನ್ನಾಗಿ ಆಚರಿಸುವುದನ್ನು ತಡೆಗಟ್ಟಬೇಕು ಎಂದು ಹಿಂದೂ ಆಂದೋಲನದ ಮುಖಂಡ ಉಪೇಂದ್ರ ಆಚಾರ್ಯ ನುಡಿದರು.
ಅವರು ಹಿಂದೂ ಜನಜಾಗ್ರತಿ ಸಮಿತಿ, ಸನಾತನ ಸಂಸ್ಥೆ, ಹಿಂದೂ ಮಹಾಸಭಾ, ಶ್ರೀ ರಾಮಸೇನೆ ವತಿಯಿಂದ ಮಂಗಳೂರಿನ ಡಿ.ಸಿ. ಕಚೇರಿ ಮುಂದೆ ನಡೆದ ಫೆ.14ರ ವಿಕೃತಿಯ ವಿರುದ್ಧ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ಸರಕಾರ ಹಿಂದೂಗಳಿಂದ ವಿರೋಧ ವ್ಯಕ್ತವಾಗಬಹುದೆಂದು ಕಳೆದ 4 ವರ್ಷಗಳಿಂದ 2011ರ ಜನಗಣನೆಯ ವರದಿಯನ್ನು ಅಡಗಿಸಿತ್ತು. ಇದರ ವರದಿಯನ್ನು ಜನತೆಯ ಮುಂದಿಡಲಿ. ದೇಶದ ನಾಗರೀಕರಿಗೆ ಸಮಾನ ಕಾನೂನಿರಬೇಕು. ಮುಸಲ್ಮಾನರಿಗೆ ಪ್ರತ್ಯೇಕ ಕಾನೂನು ಸರಿಯಲ್ಲ. ಮುಸಲ್ಮಾನರ ಶೇಖಡವಾರು ಜನಸಂಖ್ಯೆಯನ್ನು ಜನತೆಯ ಮುಂದಿಡುವ ಜೊತೆಗೆ ಫೆ.14ನ್ನು ವ್ಯಾಲಂಟೈನ್ ದಿನವೆಂದು ಆಚರಿಸಿ ಅದರ ಹೆಸರಲ್ಲಿ ವಿಕೃತಿ ನಡೆಸುವುದನ್ನು ಸರಕಾರ ತಡೆಯಬೇಕು ಎಂದು ಅವರು ಆಗ್ರಹಿಸಿದರು.
ಈ ವೇಳೆ ಹಿಂದೂ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ಧರ್ಮೇಂದ್ರ ಹಾಗೂ ವಿಜಯಲಕ್ಷ್ಮಿ ಮಾತಾಡಿದರು. ಈ ವೇಳೆ ಶ್ರೀ ರಾಮ ಸೇನೆಯ ಲೋಕೇಶ, ಶ್ರೀ ನಾಗೇಶ ವಾಮಂಜೂರು, ಆರ್ಯ ಸಮಾಜದ ಲೋಕನಾಥ ಆರ್ಯ, ವಿವೇಕ ಪೈ ಮುಂತಾದವರು ಉಪಸ್ಥಿತರಿದ್ದರು.



