ಉಳ್ಳಾಲ: ಸಹೋದರರಿಬ್ಬರು ಸೇರಿಕೊಂಡು 14ರ ಹರೆಯದ ಬಾಲಕಿಯನ್ನು ಎರಡು ತಿಂಗಳಲ್ಲಿ ಅತ್ಯಾಚಾರವೆಸಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರ ಮೇಲೂ ಅತ್ಯಾಚಾರ, ಜೀವಬೆದರಿಕೆ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಕೊಣಾಜೆ ನಿವಾಸಿಗಳಾದ ಬಶೀರ್(35) ಮತ್ತು ಆತನ ಸಹೋದರ ರಶೀದ್(34) ಬಂಧಿತರು. 2014ರ, ಡಿ.26 ರಂದು ಭಟ್ರಗುಡ್ಡ ನಿವಾಸಿ 14ರ ಹರೆಯದ ಬಾಲಕಿ ಮನೆಗೆ , ಆಕೆ ತಾಯಿ ಅಂಗಡಿಗೆ ತೆರಳಿದ್ದ ವೇಳೆ ಅಕ್ರಮವಾಗಿ ಪ್ರವೆಶಿಸಿದ್ದ ಬಶೀರ್, ಪ್ರೀತಿ ಮಾಡುತ್ತೇನೆಂದು ಹೇಳಿಕೊಂಡು ಕೈಹಿಡಿದು ಬಳಿಕ ರೂಮಿನೊಳಗೆ ಕೊಂಡೊಯ್ದು ಅತ್ಯಾಚಾರವೆಸಗಿದ್ದನು. ವಿಚಾರವನ್ನು ತಿಳಿಸಿದಲ್ಲಿ ಕೊಲ್ಲುವುದಾಗಿ ಜೀವಬೆದರಿಕೆಯನ್ನು ಒಡ್ಡಿದ್ದನೆನ್ನಲಾಗಿದೆ.
ಘಟನೆ ನಡೆದು ಒಂದು ತಿಂಗಳ ಬಳಿಕ ಜ.25 ರಂದು ಮತ್ತೆ ಅದೇ ಬಾಲಕಿ ಮನೆಗೆ ಯಾರೂ ಇಲ್ಲದ ಸಂದರ್ಭ ಪ್ರವೇಶಿಸಿದ್ದ ಬಶೀರ್ ಸಹೋದರ ರಶೀದ್ ಎಂಬಾತ ಅತ್ಯಾಚಾರ ಎಸಗಿದ್ದನು. ಈತನೂ ವಿಷಯ ಯಾರಲ್ಲೂ ಹೇಳದಂತೆ ಜೀವಬೆದರಿಕೆಯೊಡ್ಡಿ ಪರಾರಿಯಾಗಿದ್ದನೆನ್ನಲಾಗಿದೆ.
ಮೊಬೈಲಿನಲ್ಲಿ ಪತ್ತೆ: ಅತ್ಯಾಚಾರವೆಸಗಿದ ಸಹೋದರರು ಬಾಲಕಿ ಜತೆ ಮೊಬೈಲಿನಲ್ಲಿ ಸಂಪರ್ಕ ಹೊಂದಿದ್ದರು. ಬಾಲಕಿ ಮೊಬೈಲಿನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ್ದ ಹೆತ್ತವರು ವಿಚಾರಿಸಿದಾಗ ವಿಷಯ ಬಹಿರಂಗಗೊಂಡಿತ್ತು.
ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದರು !
ಮೊಬೈಲಿನಲ್ಲಿ ಬಾಲಕಿ ಜತೆಗೆ ಮಾತನಾಡಿಸಿ, ತೊಕ್ಕೊಟ್ಟುವಿನಲ್ಲಿ ಆರೋಪಿ ಸಹೋದರರು ಹೊಂದಿದ್ದ ಹೊಟೇಲಿನಲ್ಲಿ ಭೇಟಿಯಾಗುವ ನಾಟಕವನ್ನು ಮಾಡಿ ಅಲ್ಲಿಗೆ ತೆರಳಿದ್ದ ಬಾಲಕಿ ಹೆತ್ತವರು ಬಶೀರ್ ಗೆ ಸರಿಯಾಗಿ ತದುಕಿದ್ದಾರೆ. ಬಳಿಕ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದರು. ಪ್ರಥಮ ಹಂತದಲ್ಲಿ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲಾಯಿತಾದರೂ, ಹೆಚ್ಚಿನ ವಿಚಾರಣೆ ನಡೆಸಿದಾಗ ಬಾಲಕಿ ಅತ್ಯಾಚಾರ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದಳು. ಅದರಂತೆ ಉಳ್ಳಾಲ ಪೊಲೀಸರು ಸೆಕ್ಷನ್ 448, 376 ಅತ್ಯಾಚಾರ, 506 (ಜೀವಬೆದರಿಕೆ) ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಇವರಲ್ಲಿ ಬಶೀರ್ ಎರಡು ವಿವಾಹವಾಗಿದ್ದು, ಇಬ್ಬರು ಪತ್ನಿಯನ್ನು ತೊರೆದಿದ್ದಾನೆನ್ನಲಾಗಿದೆ.




