ಸುರತ್ಕಲ್: ಗ್ಯಾರೇಜ್ ಮಾಲಕ ಸೂರಿಂಜೆ ನಿವಾಸಿ ಕೇಶವ ಶೆಟ್ಟಿ ಎಂಬವರನ್ನು ಬರ್ಬರವಾಗಿ ಹತ್ಯೆಗೈದಿದ್ದ ಪ್ರಮುಖ ಆರೋಪಿ ಸತೀಶ್ ಸೂರಿಂಜೆ ಎಂಬಾತನನ್ನು ಸಿಸಿಬಿ ಪೊಲೀಸರು ಬುಧವಾರ ಮೇಲ್ ತಲಪಾಡಿ ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ.

ಕಳೆದ ಜನವರಿ 6ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಸೂರಿಂಜೆ ಜನತಾ ಬೆಟ್ಟು ಮೈದಾನಕ್ಕೆ ಶೆಟ್ಲ್ ಆಡಲೆಂದು ಬಂದಿದ್ದ ಕೇಶವ ಶೆಟ್ಟಿ ಎಂಬವರನ್ನು ಸತೀಶ್ ಸೂರಿಂಜೆ, ಲತೀಶ್ ಶೆಟ್ಟಿ, ಶೋಭರಾಜ್, ಕೃಷ್ಣ ಮತ್ತು ಯುವರಾಜ ಎಂಬವರು ತಲವಾರಿನಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿ ಬಳಿಕ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸುರತ್ಕಲ್ ಪೊಲೀಸರು ಲತೀಶ್ ಶೆಟ್ಟಿ, ಶೋಭರಾಜ್, ಕೃಷ್ಣ ಮತ್ತು ಯುವರಾಜ ಎಂಬವರನ್ನು ಮೂರೇ ದಿನದಲ್ಲಿ ಬಂಧಿಸಿದ್ದರು. ಬಳಿಕ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸತೀಶ್ ಸೂರಿಂಜೆ ಎಂಬಾತನ ಪತ್ತೆಗಾಗಿ ಪೊಲೀಸರು ಬಲೇ ಬೀಸಿದ್ದರು. ಈ ನಡುವೆ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ಮೇಲ್ ಬಸ್ ನಿಲ್ದಾಣದ ಬಳಿ ಇರುವ ಬಗ್ಗೆ ಮಾಹಿತಿಯೊಂದು ಸಿಸಿಬಿ ಪೊಲೀಸರಿಗೆ ಬುಧವಾರ ಲಭಿಸಿತ್ತು. ಇದರ ಆಧಾರದಲ್ಲಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿ ಯನ್ನು ಬಂಧಿಸಿದ್ದಾರೆ.
2010ರಲ್ಲಿ ಶಿಬರೂರಿನಲ್ಲಿ ಅನ್ಯಕೋಮಿಯ ಯುವಕನ ಕೊಲೆ ಯತ್ನ ನಡೆಸಿದ ಪ್ರಕರಣ, 2012ರಲ್ಲಿ ಸುರತ್ಕಲ್ ಮಣಿಕಂಠ ಕೊಲೆ ಪ್ರಕರಣ, 2013ರಲ್ಲಿ ಮಡಿಕೇರಿ ಜೈಲಿನಲ್ಲಿ ಜೀವ ಬೆದರಿಕೆ ಯೊಡ್ಡಿದ ಪ್ರಕರಣ, 2013ರಲ್ಲಿ ಖಡ್ಗೇಶ್ವರಿ ಎಂಬಲ್ಲಿ ನಡೆದ ಕೊಲೆಯತ್ನ ಪ್ರಕರಣ, 2013ರಲ್ಲಿ ಬಲ್ಲಾಳ್ ಭಾಗ್ನಲ್ಲಿ ಉದ್ಯಮಿ ವಿಜಯೇಂದ್ರ ಅವರ ಮೇಲೆ ನಡೆದ ಶೂಟೌಟ್ ಪ್ರಕರಣ ಮತ್ತು ತಣ್ಣೀರುಬಾವಿಯಲ್ಲಿ ಭರತೇಶ್ ಎಂಬವರ ಕೊಲೆಗೆ ಸ್ಕೆಚ್ ಹಾಕಿದ ಪ್ರಕರಣ ಹಾಗೂ ಹಫ್ತಾ ಬೆದರಿಕೆ ಪ್ರಕರಣ ಸೇರಿದಂತೆ ವಿವಿಧ ಠಾಣೆಗಳಲ್ಲಿ ಎಂಟು ಪ್ರಕರಣಗಳು ಈತನ ವಿರುದ್ಧ ದಾಖಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.

