ಬಡಕಬೈಲ್: ರಸ್ತೆ ಡಾಮರೀಕರಣಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಕೈಕಂಬ: ಕಳೆದ 25 ವರ್ಷ ಗಳಿಂದ ಬಡಕಬೈಲಿನಿಂದ ಅಮ್ಮುಂಜೆ ಕಳಾಯಿವರೆಗಿನ ರಸ್ತೆಗೆ ಡಾಮರು ಹಾಕಿಲ್ಲ. ಈ ಬಗ್ಗೆ ಶಾಸಕ ಸಹಿತ ಹಲವಾರು ಅಧಿಕಾರಿಗಳಿಗೆ ಮನವಿ ಸಲ್ಲಿ ಸಿದರೂ ಯಾವುದೇ ಪ್ರಯೋಜನವಾಗಿಲ್ಲ ಈ ಭಾಗಕ್ಕೆ ತಕ್ಷಣ ಡಾಮರು ಹಾಕಬೇಕು ಎಂದು ಎಸ್‍ಡಿಪಿಐ ಗ್ರಾಮ ಸಮಿತಿ, ಹಾಗೂ ನವೋದಯ ಆಟೋ ರಿಕ್ಷಾ ಚಾಲಕ ಮಾಲಕರ ಹಾಗೂ ನಾಗರಿಕರ ವತಿಯಿಂದ ಬಡಕಬೈಲ್ ಜಂಕ್ಷನ್‍ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತಾಡಿದ ಕರಿಯಂಗಳ ಗ್ರಾಮ ಪಂ. ಸದಸ್ಯ ಅಬೂಬಕ್ಕರ್ ಮಾತಾಡಿ ರಸ್ತೆ 3.5 ಕಿ.ಮೀ. ಉದ್ದದ ಬಡಕಬೈಲ್ ರಸ್ತೆ ಡಾಮರು ಕಾಣದೆ ಎರಡು ದಶಕಗಳೇ ಕಳೆದಿವೆ. ಧೂಳುಮಯ ರಸ್ತೆಯಲ್ಲಿ ದಿನಕ್ಕೆ 25ಕ್ಕೂ ಹೆಚ್ಚು ರಿಕ್ಷಾಗಳು, 6 ಬಸ್‍ಗಳು ಮತ್ತಿತರ ವಾಹನಗಳು ಓಡಾಡುತ್ತವೆ. ಈ ಸಮಯದಲ್ಲಿ ಏಳುವ ದೂರಿನಿಂದ ಸ್ಥಳೀಯ ನಾಗರಿಕರು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಈ ವಿಷಯವನ್ನು ನಾವು ತಹಶೀಲ್ದಾರರು, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮತ್ತು ಸದಸ್ಯರು, ಶಾಸಕರು, ಸಚಿವರ ಗಮನಕ್ಕೆ 2012ರಿಂದಲೇ ತಂದಿದ್ದೆವು. ಆದರೆ ಭರವಸೆಯ ಹೊರತಾಗಿ ಬೇರೇನೂ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ತಕ್ಷಣ ಈ ಭಾಗವನ್ನು ದುರಸ್ತಿಗೊಳಿಸಿ ತಕ್ಷಣ ಡಾಮರೀಕರಣಗೊಳಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರತಿಭಟನೆ ಸಂದರ್ಭ ಸರಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತು.
ಮನವಿ ಸ್ವೀಕರಿಸಲು ಅಧಿಕಾರಿಗಳು ಗೈರು:
ಮಧ್ಯಾಹ್ನದ ತನಕ ಪ್ರತಿಭಟನಾಕಾರರು ಉರಿಬಿಸಿಲಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದರೂ, ಯಾವುದೇ ಅಧಿಕಾರಿಗಳಾಗಲೀ, ತಹಶೀಲ್ದಾರ್ ಆಗಲಿ ಮಧ್ಯಾಹ್ನದವರೆಗೂ ಬರಲಿಲ್ಲ. ಕೊನೆಗೆ ಬೇಸೆತ್ತ ಪ್ರತಿಭಟನಾಕಾರರು ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್‍ಐ ರಕ್ಷಿತ್ ಅವರಿಗೆ ಮನವಿ ಸಲ್ಲಿಸಿದರು.
ನವೋದಯ ರಿಕ್ಷಾ ಚಾಲಕರ ಮತ್ತು ಮಾಲಕ ಸಂಘದ ಅಧ್ಯಕ್ಷ ಚಂದ್ರಶೇಖರ ಸುವರ್ಣ, ಕಾರ್ಯದರ್ಶಿ ರಾಜೇಶ್, ಎಸ್‍ಡಿಪಿಐ ಕರಿಯಂಗಳ ಸಮಿತಿ ಅಧ್ಯಕ್ಷ ಜಿ.ಉಸ್ಮಾನ್ ಕಳಾಯಿ, ಎಸ್‍ಡಿಪಿಐಐ ಬಡಕಬೈಲು ಸಮಿತಿ ಕಾರ್ಯದರ್ಶಿ ಅರೀಫ್, ನವಾಝ್, ಕರಿಯಂಗಳ ಗ್ರಾ.ಪಂ. ಸದಸ್ಯ ಬಶೀರ್ ಮತ್ತಿತರರು ಪ್ರತಿಭಟನೆಯ ನೇತೃತ್ವ ಕೈಗೊಂಡಿದ್ದರು.








