ಬಂಟ್ವಾಳ: ಅಕ್ಷರ ದಾಸೋಹ ಯೋಜನೆಯನ್ನು ಖಾಸಗೀಕರಣಗೊಳಿಸುವ ಉದ್ದೇಶದಿಂದ ಕ್ಲಸ್ಟರ್ ಕಿಚನ್ ಯೋಜನೆಯನ್ನು ಜಾರಿಗೊಳಿಸುವುದನ್ನು ವಿರೋಧಿಸಿ ಮತ್ತು ಬಾಕಿ ಇರುವ ವೇತನವನ್ನು ಕೂಡಲೇ ಪಾವತಿಸುವಂತೆ ಆಗ್ರಹಿಸಿ ಹಾಗೂ ಬಿಸಿಯೂಟ ನೌಕರರಿಂದ ಹೆಚ್ಚುವರಿ ಕೆಲಸ ಮಾಡಿಸುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಅಕ್ಷರ ದಾಸೋಹ ನೌಕರರ ಸಂಘ ನೇತೃತ್ವದಲ್ಲಿ ಬಂಟ್ವಾಳ ಆಡಳಿತ ಸೌಧದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಘೋಷಣೆಗಳನ್ನು ಕೂಗಿದರು. ಬಳಿಕ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚ್ಚಿನ್ ಕುಮಾರ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ರಾಮಣ್ಣ ವಿಟ್ಲ ಅವರು ಮಾತನಾಡಿ, ಅಕ್ಷರ ದಾಸೋಹ ಯೋಜನೆಯನ್ನು ಕ್ಲಸ್ಟರ್ ಕಿಚನ್ ಹೆಸರಿನಲ್ಲಿ ಖಾಸಗೀಕರಣಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇದರಿಂದ ಬಿಸಿಯೂಟ ನೌಕರರ ಉದ್ಯೋಗ ಭದ್ರತೆ ಮತ್ತು ಮಕ್ಕಳಿಗೆ ಸ್ಥಳೀಯವಾಗಿ ಗುಣಮಟ್ಟದ ಆಹಾರ ಒದಗಿಸುವ ವ್ಯವಸ್ಥೆಗೆ ಧಕ್ಕೆಯಾಗಲಿದೆ.
ಸರ್ಕಾರ ಕೂಡಲೇ ಈ ಯೋಜನೆಯನ್ನು ಕೈಬಿಡಬೇಕು. ನೌಕರರಿಗೆ ಬಾಕಿ ಇರುವ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಈಗಾಗಲೇ ಕಡಿಮೆ ಗೌರವಧನದಲ್ಲಿ ದುಡಿಯುತ್ತಿರುವ ನೌಕರರ ಮೇಲೆ ಹೆಚ್ಚುವರಿ ಕೆಲಸದ ಹೊರೆ ಹೇರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಮಿತಿ ಸದಸ್ಯರಾದ ಸಂಜೀವ ಬೆಳ್ತಂಗಡಿ, ಅಕ್ಷರ ದಾಸೋಹ ನೌಕರರ ಸಂಘದ ಮುಖಂಡರಾದ ವಿನಯ ನಡುಮುಗೆರು, ಮಮತ ಬಿಳಿಯೂರು, ಹೇಮಾವತಿ ಕೆದಿಲ, ನಳಿನಿ ವಿಟ್ಲ, ಅಲೀಷ ಡಿ’ಸೋಜ ಸಾಲೆತ್ತೂರು, ಶಶಿಕಲಾ ಕಾಡುಮಠ, ಪೂರ್ಣಿಮಾ ಕಾರ್ಲ, ಶಮೀಮಾ ಬೊಳಂತಿಮೊಗರು, ಚಿತ್ರ ಮದ್ವ ಮತ್ತಿತರರಿದ್ದರು.
