ಬಂಟ್ವಾಳ: ವಟಪುರ ಕ್ಷೇತ್ರವೆಂದು ಪ್ರತೀತಿ ಹೊಂದಿರುವ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವರ ದಿವ್ಯ ಸನ್ನಿಧಿಯಲ್ಲಿ ಲೋಕ ಕಲ್ಯಾಣಕ್ಕಾಗಿ “25 ನೇ ವರ್ಷದ” ವಿಶ್ವರೂಪದರ್ಶನವು ಭಾನುವಾರ ನೆರವೇರಿದ್ದು,ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶ್ರೀ ತಿರುಮಲ ವೆಂಕಟರಮಣ ದೇವರ ದಿವ್ಯ ದರ್ಶನ ಪಡೆದು ಪುನೀತರಾದರು.

ಮುಂಜಾನೆಯ ಬ್ರಾಹ್ಮೀ ಮುಹೂರ್ತದಲ್ಲಿ ದೇವಳದ ಪ್ರಧಾನ ಅರ್ಚಕರಾದ ಅವರು ತುಳಸಿಕಟ್ಟೆಯ ಬಳಿ ದೇವಳದ ಪ್ರಧಾನ ಅರ್ಚಕರು ದೀಪಪ್ರಜ್ವಲನಗೈಯುತ್ತಿದ್ದಂತೆ ನೆರೆದಿದ್ದ ಭಗವದ್ಬಕ್ತರು ದೇವಳದ ಸುತ್ತ,ಹೊರಾಂಗಣ ಹಾಗೂ ನದೀತೀರದ ವರೆಗೂ ಅಳವಡಿಸಲಾಗಿದ್ದ ಅಣತೆಯ ದಿವ್ಯಜ್ಯೋತಿಯನ್ನು ಬೆಳಗಿದರು.

ಬಳಿಕ ಪ್ರಾತಕಾಲ 5.00 ಗಂಟೆಗೆ ಕಾಕಡಾರತಿ, ಜಾಗರ ಪೂಜೆಯ ನಂತರ ಭಕ್ತರಿಗೆ ವಿಶೇಷಾಲಂಕಾರಗೊಂಡ ಶ್ರೀ ತಿರುಮಲ ವೆಂಕಟರಮಣ ದೇವರ ವಿಶ್ವರೂಪದರ್ಶನ ಭಾಗ್ಯ ಪಡೆದು ಕೃತಾರ್ಥರಾದರು. ಇದೇ ವೇಳೆ ಪ್ರಸಾದ ವಿತರಣೆ ನಡೆಯಿತು.
ಮುಂಜಾನೆಯ ಪ್ರಶಾಂತ ವಾತಾವರಣದಲ್ಲಿ ದೇವಳದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ,ಭಜನೆ ಹಾಗೂ ಧಾರ್ಮಿಕ ವಿಧಿವಿಧಾನಗಳಲ್ಲಿ ಭಗವದಬಕ್ತರು ತಲ್ಲೀನರಾದರು.
ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರರು,ಮೊಕ್ತೇಸರರು, ಸೇವಾದಾರರು, ಹಲವಾರು ಗಣ್ಯರು ಭಾಗವಹಿಸಿದ್ದರು.
