ಬಂಟ್ವಾಳ: ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆಯ ಸಂದರ್ಭದಲ್ಲಿ ಅರ್ಹ  ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಕ್ರಮವಾಗಿ ಅಳಿಸುವ ಉದ್ದೇಶದಿಂದ ಸುಳ್ಳು ಹಾಗೂ ಆಧಾರರಹಿತ ಫಾರಂ–7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದ  ಬಂಟ್ವಾಳ ಕಾಂಗ್ರೆಸ್ ಮುಖಂಡರ ನಿಯೋಗ ಮಂಗಳವಾರ ಬಂಟ್ವಾಳ ತಾಲೂಕು ಚುನಾವಣಾಧಿಕಾರಿಯು ಆದ  ತಹಶೀಲ್ದಾರ್ ಅವರಿಗೆ  ಮನವಿ ಸಲ್ಲಿಸಿದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಣಿ ಹಾಗೂ ಸಾಲೆತ್ತೂರು ಗ್ರಾಮದ ವಿವಿಧ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳನ್ನು ಅಳಿಸುವಂತೆ ಫಾರಂ–7 ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.


ಮತದಾರರು ತಮ್ಮ ವಿಳಾಸದಲ್ಲಿ ವಾಸವಾಗಿಲ್ಲ ಅಥವಾ ಸ್ಥಳಾಂತರಗೊಂಡಿದ್ದಾರೆ ಎಂಬ ಕಾರಣಗಳನ್ನು ನೀಡಿ ಫಾರಂ–7 ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಈ ಅರ್ಜಿಗಳಲ್ಲಿನ ಮಾಹಿತಿ ವಾಸ್ತವಾಂಶಗಳಿಗೆ ವಿರುದ್ಧವಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.


ಹೆಸರು ಅಳಿಸಲು ಗುರಿಪಡಿಸಲಾದವರು ನೈಜ ಹಾಗೂ ಅರ್ಹ ಮತದಾರರಾಗಿದ್ದು, ಅವರ ಮತದಾನದ ಹಕ್ಕಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ರಮಾನಾಥ ರೈ ಅವರು ಈ ಸಂದರ್ಭ ಸುದ್ದಿಗಾರರಿಗೆ ತಿಳಿಸಿದರು.
ಸುಳ್ಳು ಮಾಹಿತಿ ಅಥವಾ ನಕಲಿ ದಾಖಲೆಗಳನ್ನು ಆಧರಿಸಿ ಫಾರಂ–7 ಅರ್ಜಿಗಳನ್ನು ಸಲ್ಲಿಸಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಈಗಾಗಲೇ ಯಾವುದೇ ಅರ್ಹ ಮತದಾರರ ಹೆಸರನ್ನು ತಪ್ಪಾದ ಅಥವಾ ಸುಳ್ಳು ಅರ್ಜಿಯ ಆಧಾರದ ಮೇಲೆ ಮತದಾರರ ಪಟ್ಟಿಯಿಂದ ಅಳಿಸಲಾಗಿದ್ದರೆ, ಕಾನೂನುಬದ್ಧ ಪ್ರಕ್ರಿಯೆಯ ಮೂಲಕ ಅವರ ಹೆಸರುಗಳನ್ನು ಪುನಃ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.


ಚುನಾವಣಾ ಕಾನೂನುಗಳ ಅಡಿಯಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಎಂದು ಆಗ್ರಹಿಸಿದ ಅವರು ಫಾರಂ–7 ಅರ್ಜಿಗಳ ವಿಚಾರವನ್ನು ತುರ್ತಾಗಿ ಹಾಗೂ ನಿಷ್ಪಕ್ಷಪಾತವಾಗಿ ಪರಿಶೀಲಿಸಿ,ಯಾವುದೇ ಪಕ್ಷದವರೇ ಅಗಲೀ ಅರ್ಹ ಮತದಾರರ ಹೆಸರುಗಳು ಯಾವುದೇ ಕಾರಣಕ್ಕೂ ತಪ್ಪಾಗಿ ಮತದಾರರ ಪಟ್ಟಿಯಿಂದ ಅಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು, ಮತದಾರರ ಪಟ್ಟಿಯ ಸಮಗ್ರತೆಯನ್ನು ಕಾಪಾಡುವುದರ ಜೊತೆಗೆ, ಪ್ರತಿಯೊಬ್ಬ ಅರ್ಹ ಮತದಾರನಿಗೂ ತನ್ನ ಮತದಾನದ ಹಕ್ಕು ದೊರೆಯುವಂತೆ ಕ್ರಮ ವಹಿಸಬೇಕು ಎಂದು ರಮಾನಾಥ ರೈ ಅವರು ಚುನಾವಣಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ.


ಈ ಸಂದರ್ಭದಲ್ಲಿ ಬೂಡಾ ಅಧ್ಯಕ್ಷ ಬೇಬಿಕುಂದರ್,ಜಿ.ಪಂ.ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೇಖರಜೈನ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಲಕೃಷ್ಣ ಅಂಚನ್,ಚಂದ್ರಶೇಖರ ಭಂಡಾರಿ,ಪಕ್ಷದ ಮುಖಂಡರಾದ ಪಿಯೂಸ್ ರೋಡ್ರಿಗಸ್,ಬೊಂಡಾಲ ಚಿತ್ತರಂಜನ್ ಶೆಟ್ಟಿ, ಅಬ್ಬಾಸ್ ಆಲಿ,
ಜಯಂತಿ ವಿ.ಪೂಜಾರಿ,ಸಂಜೀವ ಪೂಜಾರಿ ಬೊಳ್ಳಾಯಿ,ಐಡಾ ಸುರೇಶ್,ಮಲ್ಲಿಕಾ ಶೆಟ್ಟಿ,ಸದಾಶಿವ ಬಂಗೇರ,ಸುರೇಶ್ ಕುಲಾಲ್ ನಾವೂರ,ನವಾಜ್ ಬಡಕಬೈಲ್,ಸುದರ್ಶನ್ ಜೈನ್,ಮಹಮ್ಮದ್ ನಂದಾವರ, ಮಹಮ್ಮದ್ ಶರೀಫ್,ಸಿದ್ದೀಕ್ ಗುಡ್ಡೆಯಂಗಡಿ, ಹಸೈನಾರ್, ಸುದೀಪ್ ಕುಮಾರ್ ರೈ ಮಾಣಿ,ಸುರೇಶ್ ಜೋರ,ಜಗದೀಶ್ ಕುಂದರ್ ಮೊದಲಾದವರಿದ್ದರು

By Suddi9

Leave a Reply

Your email address will not be published. Required fields are marked *