ಬಂಟ್ವಾಳ: ಬಂಟ್ವಾಳ ಬಿಜೆಪಿ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಆಟಿ ತಿಂಗಳ ಸಂಭ್ರಮ ಹಾಗೂ ಕರಾವಳಿಯ ಸಾಂಪ್ರದಾಯಿಕ ಆಚರಣೆಗಳನ್ನು ಪರಿಚಯಿಸುವ ಉದ್ದೇಶದಿಂದ ‘ಆಟಿದ ಗಮ್ಮತ್’ ಕಾರ್ಯಕ್ರಮ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ನಡೆಯಿತು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ , ಆಟಿ ತಿಂಗಳು ಕರಾವಳಿಯ ಜನಜೀವನ, ಸಂಸ್ಕೃತಿ ಹಾಗೂ ಸಂಪ್ರದಾಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿ ಜನರು ಪ್ರಕೃತಿಯೊಂದಿಗೆ ಬೆರೆತು ಸರಳ ಜೀವನ ನಡೆಸುತ್ತಿದ್ದರು. ಆಟಿ ತಿಂಗಳ ವಿಶೇಷ ಆಹಾರ ಪದ್ಧತಿ, ಆಚರಣೆ ಹಾಗೂ ಜನಪದ ಸಂಪ್ರದಾಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು ಎಂದು ಹೇಳಿದರು.


ಮಹಿಳಾ ಕಾರ್ಯಕರ್ತರು  ಪಕ್ಷದ ವಿಚಾರಧಾರೆ ಹಾಗೂ ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಮನೆ,ಮನೆಗೆ ತಲುಪಿಸುವುದರ ಜತೆಗೆ ರಾಜ್ಯ ಸರಕಾರದ ವೈಫಲ್ಯವನ್ನು ಮನವರಿಕೆ ಮಾಡುವ ಮೂಲಕ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವಲ್ಲಿ ಮಹಿಳಾ ಮೋರ್ಚಾ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯಿಂದ ಪಕ್ಷ ಸಂಘಟನೆ ಮತ್ತಷ್ಟು ಸದೃಢವಾಗಲಿದೆ ಎಂದು ತಿಳಿಸಿದರು.
ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್ ಮಾತನಾಡಿ, ಪಕ್ಷದ ಸಂಘಟನೆಯಲ್ಲಿ ಮಹಿಳಾ ಮೋರ್ಚಾದ ಕೊಡುಗೆ ಮಹತ್ವದ್ದಾಗಿದೆ ಎಂದರು.ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸುಲೋಚನ ಜಿ.ಕೆ. ಭಟ್ ಅವರು ಆಟಿ ತಿಂಗಳ ವಿಶೇಷತೆ ಮತ್ತು ಮಹತ್ವದ ಬಗ್ಗೆ  ಮಾಹಿತಿ ನೀಡಿದರು.


ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ, ಬಂಟ್ವಾಳ ಮಂಡಲದ ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ ಹಾಗೂ ಸುದರ್ಶನ ಬಜ, ನಾಟಿ ವೈದ್ಯ ಗಂಗಾಧರ ಪಂಡಿತ್ ಗೋಳಿಕಟ್ಟೆ, ಬಂಟ್ವಾಳ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಶೆಟ್ಟಿ, ಮಹಿಳಾ ಮೋರ್ಚಾ ಪ್ರಭಾರಿ ಹರ್ಷಿಣಿ ಪುಷ್ಪಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷತಾ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಆಟಿ ತಿಂಗಳ ಸಾಂಪ್ರದಾಯಿಕ ಆಹಾರ ಪದಾರ್ಥಗಳು, ಆಚರಣೆಗಳು ಹಾಗೂ ಕರಾವಳಿಯ ಜನಪದ ಸಂಸ್ಕೃತಿಯ ವೈಶಿಷ್ಟ್ಯಗಳನ್ನು ಪರಿಚಯಿಸಲಾಯಿತು. ಮಹಿಳಾ ಕಾರ್ಯಕರ್ತರು ಸಾಂಪ್ರದಾಯಿಕ ಆಟಿ ತಿಂಗಳ ತಿಂಡಿಗಳನ್ನು ಸಿದ್ಧಪಡಿಸಿ, ಕಾರ್ಯಕ್ರಮದ ವಿಶೇಷತೆಯನ್ನು ಹೆಚ್ಚಿಸಿದರು.


ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಶ್ರೀ ಸ್ವಾಗತಿಸಿದರು. ಪುಷ್ಪಾ ಕಾಮತ್ ವಂದಿಸಿದರು. ರಜನಿ ಚಿಕ್ಕಯ್ಯ ಮಠ ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *