ಬಂಟ್ವಾಳ: ಭಾರತೀಯ ಮಜ್ದೂರು ಸಂಘ. ( ಬಿ ಎಂ ಎಸ್)ಅಶ್ರಯದಲ್ಲಿ ಕಾರ್ಮಿಕರ ನ್ಯಾಯುತ ಹಕ್ಕುಗಳಿಗಾಗಿ ಆ.17 ರಂದು ದೇಶವ್ಯಾಪಿ ಪ್ರತಿಭಟನೆಯನ್ನು ಆಯೋಜಿಸಿದ್ದು,ಇದರ ಭಾಗವಾಗಿ ಬಿಎಂಎಸ್ ದ.ಕ.ಜಿಲ್ಲಾ ಘಟಕದ ಆಶ್ರಯದಲ್ಲಿ ಆಗಸ್ಟ್ 18 ರಂದು ಮಂಗಳೂರಿನ ಪುರಭವನದ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಲಿದೆ ಎಂದು ಬಿಎಂಎಸ್ ನ ಜಿಲ್ಲಾಧ್ಯಕ್ಷ ,ನ್ಯಾಯವಾದಿ ಅನಿಲ್ ಕುಮಾರ್ ಯು ತಿಳಿಸಿದ್ದಾರೆ.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರಿಗೆ ನ್ಯಾಯಯುತ ವೇತನ,ಉದ್ಯೋಗ, ಸಾಮಾಜಿಕ ಭದ್ರತೆ,ಪಿಂಚಣಿ,ಆರೋಗ್ಯ ರಕ್ಷಣೆ,ಸುರಕ್ಷಿತ ಕೆಲಸದ ವಾತಾವರಣ ಒದಗಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಕಲ್ಪಿಸುವಂತೆ ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಈ ಸಂದರ್ಭದಲ್ಲಿ ಒತ್ತಾಯಿಸಲಾಗುವುದು ಎಂದರು.
ಇಎಸ್ ಐ ವೇತನ ಮಿತಿಯನ್ನು ಪ್ರಸ್ತುತ 21 ಸಾವಿರ ರೂ.ಗಳಿಂದ 42 ಸಾವಿರ ರೂ.ಗೆ ಏರಿಸಬೇಕು, ಕನಿಷ್ಠ ಮಾಸಿಕ ಪಿಂಚಣಿಯನ್ನು ಪ್ರಸ್ತುತ 1 ಸಾವಿರ ರೂ.ಗಳಿಂದ 7500 ರೂ.ಗೆ ಏರಿಸಿ ಪಿಂಚಣಿದಾರರಿಗೆ ಡಿಎ ಹಾಗೂ ಸಮಗ್ರ ಆರೋಗ್ಯ ಸೌಲಭ್ಯ ಒದಗಿಸಬೇಕು. ಇಪಿಎಫ್ ವೇತನ ಮಿತಿಯನ್ನು ಪ್ರಸ್ತುತ 15 ಸಾವಿರ ರೂ.ಗಳಿಂದ 30 ಸಾವಿರ ರೂ.ಗೆ ಹೆಚ್ಚಿಸಬೇಕು, ಆಶಾ, ಅಂಗನವಾಡಿ ಸಹಿತ ಎಲ್ಲಾ ಯೋಜನಾ ನೌಕರರ ಗೌರವಧನವನ್ನು ಸಮರ್ಪಕವಾಗಿ ಹೆಚ್ಚಿಸಬೇಕು. ಗುತ್ತಿಗೆ, ಹೊರಗುತ್ತಿಗೆ ಸಹಿತ ಎಲ್ಲಾ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು ಸಹಿತ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಯಲಿದೆ ಎಂದರು.
ರಿಕ್ಷಾ ಚಾಲಕ,ಮಾಲಕರ,ಆಶಾ ,ಅಂಗನವಾಡಿ ಕಾರ್ಯಕರ್ತೆಯರ,ಬೀಡಿ ಕಾರ್ಮಿಕರ ಸಹಿತ ವಿವಿಧ ಸ್ತರಗಳಲ್ಲಿ ದುಡಿಯುವ ಕಾರ್ಮಿಕರಿಗೂ ಗೌರವಯುತವಾದ ಜೀವನ ನಡೆಸಲು ಬೇಕಾದ ವೇತನ,ಉದ್ಯೋಗ ಭದ್ರತೆ,ಸಾಮಾಜಿಕ ಭದ್ರತೆಯನ್ನು ಖಚಿತಪಡಿಸುವ ಸಮಗ್ರ ನೀತಿಯನ್ನು ಸರಕಾರ ಜಾರಿಗೊಳಿಸುವಂತೆಯು ಒತ್ತಾಯಿಸಲಾಗುವುದು ಎಂದ ಅವರು ಜಿಲ್ಲೆಯ ಕಾರ್ಮಿಕರ ಸ್ಥಳೀಯ ಸಮಸ್ಯೆಗಳ ಕುರಿತು ರಾಜ್ಯ ಸರಕಾರ ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಕಾರ್ಮಿಕ ಸಂಘಟನೆಯೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಬಿಎಂಎಸ್ ಆಗ್ರಹಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಎಂಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮಣಿಹಳ್ಳ,ಪದಾಧಿಕಾರಿಗಳಾದ ನಾರಾಯಣ ಪೂಜಾರಿ, ನಳಿನಿ ಅಡ್ಯಾರ್, ಗಿರಿಜಾ, ತುಳಸಿ ದೇವರಾಜ, ಸದಾನಂದ ಗೌಡ, ಶ್ರೀಕಾಂತ್ ಪಾನೇರ್, ಸತೀಶ್ ಭಂಡಾರಿಬೆಟ್ಟು,ಸದಾನಂದ ಗೌಡ ನಾವೂರು ಉಪಸ್ಥಿತರಿದ್ದರು.
