ಬಂಟ್ವಾಳ :ಪತ್ರಕರ್ತರು ಸಮಾಜದ ಕಣ್ಣು ಮತ್ತು ಕಿವಿಗಳಿದ್ದಂತೆ, ಪೊಲೀಸರು ಮತ್ತು ಪತ್ರಿಕಾರಂಗ ಜತೆಯಾದರೆ ಸಮಾಜದಲ್ಲಾಗುವ ಅಪರಾಧಕ್ಕೆ ನಿಯಂತ್ರಣಕ್ಕೆ ತರಲು ಸಾಧ್ಯ, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ.

ಪತ್ರಕರ್ತರ ವರದಿಗಳಿಂದ ಸಮಾಜಕ್ಕೆ ಮಾಹಿತಿ, ಜಾಗೃತಿ ದೊರಕುವುದಲ್ಲದೆ, ದಿಕ್ಕನ್ನು ಬದಲಿಸುವ ಅವಕಾಶ ಇದೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣಾ ನಿರೀಕ್ಷಕ ಅನಂತಪದ್ಮನಾಭ ಹೇಳಿದ್ದಾರೆ. ಬುಧವಾರ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆ , ಪುರಸ್ಕೃತ ಪತ್ರಕರ್ತರಿಗೆ ಸನ್ಮಾನ ಹಾಗೂ ಗುರುತುಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸೋಶಿಯಲ್ ಮೀಡಿಯಾ ಇವತ್ತು ಅಂತರ್ಜಾಲ ಮೂಲಕ ತೆರೆದುಕೊಂಡಿದೆ. ಸತ್ಯಾಂಶವನ್ನು ಮನದಟ್ಟು ಮಾಡುವ ಕೆಲಸವನ್ನು ಮಾಧ್ಯಮಗಳು ಮಾಡುವ ಮೂಲಕ ಪ್ರಬುದ್ಧತೆ ಮೆರೆದಿದೆ ಎಂದ ಅವರು ಸಾರ್ವಜನಿಕರು 112 ಬಳಕೆ ಮಾಡುವಂತೆ ಜಾಗೃತಿ ಮೂಡಿಸಬೇಕು. ಪ್ರಸಕ್ತ ದಿನಗಳಲ್ಲಿ ಸೈಬರ್ ಕ್ರೈಮ್ ಜಾಸ್ತಿಯಾಗುತ್ತಿದ್ದು, ಈ ಕುರಿತು ಅರಿವು ಮೂಡಿಸುವ ಕಾರ್ಯ ಆಗಬೇಕು ಎಂದರು.

ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಅಧ್ಯಕ್ಷತೆ ವಹಿಸಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಮಾತನಾಡಿ, ಸಮಾಜದ ಆಗುಹೋಗುಗಳ ಬಗ್ಗೆ ಗಮನಹರಿಸುವ ಪತ್ರಕರ್ತರಿಗೆ ನಿವೃತ್ತಿಯ ಕಾಲಕ್ಕೆ ಪಿಂಚಣಿ ಸಹಿತ ಯಾವುದೇ ಸವಲತ್ತು ಸಿಗುವುದಿಲ್ಲ. ಇದರಲ್ಲಿ ದೊಡ್ಡ ಬದಲಾವಣೆ ಆಗಬೇಕಿದೆ. ಈ ನಿಟ್ಟಿನಲ್ಲಿ ನಾವು ಮುಂದಡಿ ಇಡೋಣ ಎಂದರು.
ಕೆಯುಡಬ್ಲ್ಯುಜೆ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಬಸ್ ಪಾಸ್ ಸಹಿತ ಪತ್ರಕರ್ತರಿಗೆ ದೊರಕುವ ಸವಲತ್ತುಗಳ ಕುರಿತು ನಡೆಸಿದ ಪ್ರಯತ್ನಗಳ ಕುರಿತು ಮಾಹಿತಿ ನೀಡಿದರು.
ಕಾಸರಗೋಡು ಕ್ಷೇಮಾಭಿವೃದ್ಧಿ ಕನ್ನಡ ಸಂಘದ ಕೆಯುಡಬ್ಲುಜೆ ದತ್ತಿ ಪ್ರಶಸ್ತಿ ಪುರಸ್ಕೃತ ಹರೀಶ ಮಾಂಬಾಡಿ ಮತ್ತು ಉತ್ತಮ ವರದಿಗಾಗಿ 2024ನೇ ಸಾಲಿನ ಕೆಯುಡಬ್ಲುಜೆ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಾದ ಅಬ್ದುಲ್ ರಹಿಮಾನ್ ತಲಪಾಡಿ ಅವರನ್ನು ಈ ಸಂದರ್ಭ ಸನ್ಮಾನಿಸಿ. ಪುತ್ತೂರಿಗೆ ವರ್ಗಾವಣೆಗೊಂಡಿರುವ ವರದಿಗಾರ ಕಿರಣ್ ಸರಪಾಡಿ ಅವರಿಗೆ ಬೀಳ್ಕೊಡುಗೆ ಹಾಗೂ ಬಂಟ್ವಾಳಕ್ಕೆ ವರದಿಗಾರರಾಗಿ ಆಗಮಿಸಿದ ದಿನೇಶ್ ಇರಾ ಅವರನ್ನು ಸ್ವಾಗತಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಂದೀಪ್ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆಲಿ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯ ಹರೀಶ್ ಮಾಂಬಾಡಿ ವಂದಿಸಿದರು. ಉಪಾಧ್ಯಕ್ಷ ರಮೇಶ್ ಕೆ. ಪುಣಚ, ಕೋಶಾಧಿಕಾರಿ ಚಂದ್ರಶೇಖರ ಕಲ್ಮಲೆ, ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾದ ಉದಯಶಂಕರ ನೀರ್ಪಾಜೆ, ರತ್ನದೇವ್ ಪುಂಜಾಲಕಟ್ಟೆ, ವೆಂಕಟೇಶ ಬಂಟ್ವಾಳ, ಸದಸ್ಯರಾದ ಗಣೇಶ ಪ್ರಸಾದ ಪಾಂಡೇಲು, ಯಾದವ ಕುಲಾಲ್ ಅಗ್ರಬೈಲ್, ಕಿಶೋರ್ ಪೆರಾಜೆ, ನಿಶಾಕಿರಣ್ ಬಾಳೆಪುಣಿ ಉಪಸ್ಥಿತರಿದ್ದರು.
