ಬಂಟ್ವಾಳ :ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮಿ ಕ್ಷೇತ್ರ ಶ್ರೀ ಧಾಮ ಮಾಣಿಲದಲ್ಲಿ ಜು.12ರಿಂದ ಆ. 28 ರವರೆಗೆ ನಡೆಯಲಿರುವ ಸಾಮೂಹಿಕ ಶ್ರೀ ಮಹಾಲಕ್ಷ್ಮಿ ಪೂಜೆ ಹಾಗೂ ವರಮಹಾಲಕ್ಷ್ಮಿ ವೃತಾಚರಣೆ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ವಿತರಣಾ ಕಾರ್ಯಕ್ರಮ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಸಾನಿಧ್ಯದಲ್ಲಿ ಸೋಮವಾರ ನಡೆಯಿತು.

ಈ ಸಂದರ್ಭದಲ್ಲಿ ಆಶೀರ್ವಚನಗೈದ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಅವರು, ಮಾಣಿಲ ಕ್ಷೇತ್ರವು ಕೇವಲ ಪೂಜೆ-ಪುನಸ್ಕಾರಗಳಿಗೆ ಸೀಮಿತವಾಗದೆ, ಸಮಾಜದಲ್ಲಿ ಸಾತ್ವಿಕತೆ, ಶಾಂತಿ ಮತ್ತು ಸೇವಾ ಮನೋಭಾವ ಬೆಳೆಸುವ ಉದ್ದೇಶದಿಂದ ಹಲವು ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ಬಂಟ್ವಾಳ ತಾಲೂಕಿನ ಭಕ್ತರು ವಿಶೇಷವಾಗಿ ದವಸ-ಧಾನ್ಯಗಳನ್ನು ಸಮರ್ಪಿಸುವ ಮೂಲಕ ಅನ್ನದಾನ ಮತ್ತು ಬಾಲಭೋಜನ ಕಾರ್ಯಕ್ರಮಗಳಿಗೆ ಕೈಜೋಡಿಸುವಂತೆ ಅವರು ಹೇಳಿದರು.
ಯುವಜನಾಂಗ ಭಾರತೀಯ ಸಂಸ್ಕೃತಿ, ಗುರು-ಹಿರಿಯರಿಗೆ ಗೌರವ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ದುಶ್ಚಟಗಳಿಂದ ದೂರವಿದ್ದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮವೂ ಸಮಾಜ ಪರಿವರ್ತನೆಯ ಸಾಧನವಾಗಬೇಕು ಎಂದ ಶ್ರೀಗಳು ಸಮಾಜದಲ್ಲಿ ಸೌಹಾರ್ದತೆ, ಸೇವಾ ಮನೋಭಾವ ಹಾಗೂ ಸತ್ಪ್ರವೃತ್ತಿಗಳನ್ನು ಬೆಳೆಸುವ ವೇದಿಕೆಯಾಗಬೇಕು ಎಂದರು.
