ಬಂಟ್ವಾಳ:  ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಸೂರಿಗಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ರಾಜ್ಯ ಸರಕಾರ ಇದುವರೆಗೂ ಮನೆಗಳನ್ನು ಮಂಜೂರು ಮಾಡದಿರುವ ಹಿನ್ನಲೆಯಲ್ಲಿ ಸಾವಿರಾರು ಕುಟುಂಬಗಳು ಸೂರಿಲ್ಲದೆ ಕಂಗಾಲಾಗಿದ್ದಾರೆ ಎಂದು  ಬಂಟ್ವಾಳ ತಾ.ಪಂ.ನ ಮಾಜಿ ಸದಸ್ಯ ಪ್ತಭಾಕರ ಪ್ರಭು ಅವರು ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರದ ಮೂಲಕ ಗಮನ ಸೆಳೆದಿದ್ದಾರೆ.

ಕಳೆದ 3 ವರ್ಷಗಳಿಂದ ಆದೆಷ್ಟೋ ಫಲಾನುಭವಿಗಳು ಗ್ರಾಮ ಪಂಚಾಯತ್, ಗ್ರಾಮ ಸಭೆ , ವಾರ್ಡ್ ಸಭೆಗಳಲ್ಲಿ ಭಾಗವಹಿಸಿ ವಸತಿ ಯೋಜನೆಗಾಗಿ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ ಮನೆ ಕಟ್ಟಲು ಪೂರ್ವ ತಯಾರಿ ನಡೆಸಿ ಸರಕಾರದ ವಸತಿ ಯೋಜನೆಯ ಸಹಾಯಧನಕ್ಕಾಗಿ ಗ್ರಾಮ ಪಂಚಾಯತ್ ಕಛೇರಿಗಳಿಗೆ ಅಲೆದಾಡಿ ಸುಸ್ತಾಗಿ  ಪಂಚಾಯತ್ ಸಿಬ್ಬಂದಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಪತ್ರದಲ್ಲಿ‌ ವಿವರಿಸಿದ್ದಾರೆ.
ಕೆಲವೆಡೆ ಫಲಾನುಭವಿಗಳು ವಸತಿ ಮಂಜೂರಾತಿ ನಿರೀಕ್ಷೆಯಿಂದ ಮನೆ ಅಡಿ ಸ್ಥಳದಲ್ಲಿ ಪಂಚಾಂಗ ನಿರ್ಮಿಸಿಕೊಂಡು ಮನೆ ಮಂಜೂರಾತಿಗಾಗಿ ಕಾಯುತ್ತಿದ್ದು , ಸರಕಾರದ ಯಾವುದೇ ಗ್ಯಾರಂಟಿಗಳು ಸಿಗದಿದ್ದರೂ ಪರವಾಗಿಲ್ಲ ವಾಸ್ತವ್ಯಕ್ಕೆ ಸೂರಿನ ಗ್ಯಾರಂಟಿಯನ್ನಾದರೂ ಕೊಡುವಂತೆ  ಒತ್ತಾಯಿಸುತ್ತಿದ್ದಾರೆ ಎಂದು ಪ್ರಭು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಬಂದಿರುವ ಮನೆಗಳನ್ನು ಹೊರತು ಪಡಿಸಿ ರಾಜ್ಯ ಸರಕಾರದಿಂದ ಒಂದೇ ಒಂದು ಮನೆಯು ಮಂಜೂರಾತಿಯಾಗದಿರುವುದು ದುರದೃಷ್ಟಕರವಾಗಿದೆ.ಈ ಹಿನ್ನಲೆಯಲ್ಲಿ ಪ್ರತಿ ಗ್ರಾಮ ಪಂಚಾಯತ್ ವಾರು 10 ಮನೆಗಳನ್ನಾದರೂ ತಕ್ಷಣದಿಂದಲೇ ಮಂಜೂರುಗೊಳಿಸಿ ವಾಸ್ತವ್ಯದ ನೆಲೆ ಇಲ್ಲದವರಿಗೆ ಸೂರಿನ ಆಶ್ರಯ ನೀಡುವಂತೆ  ಒತ್ತಾಯಿಸಿದ್ದಾರೆ.

By Suddi9

Leave a Reply

Your email address will not be published. Required fields are marked *