ಬಂಟ್ವಾಳ: ಮನೆ ಕುಸಿದ ಪರಿಣಾಮ ದಿಕ್ಕಿಲ್ಲದ ಬಡ ಕುಟುಂಬವೊಂದಕ್ಕೆ ಮಂಗಳೂರು ಹೊರವಲಯದಲ್ಲಿರುವ ಅಡ್ಯಾರ್ ಗಾರ್ಡನ್ ಮಾಲಕರು ಸುಮಾರು10 ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದು,ಮನೆಯ ಗೃಹ ಪ್ರವೇಶ ನೆರವೇರಿಸಿ ಕೀತನ್ನು ಕುಟುಂಬಕ್ಕೆ ಹಸ್ತಾಮನತರಿಸಲಾಯಿತು.

ಅರ್ಕುಳ ಗ್ರಾಮದ ತುಪ್ಪೆ ಕಲ್ಲು ನಿವಾಸಿ ಜಯಂತಿ ಎಂಬವರ ಮನೆಯು ಕಳೆದ ವರ್ಷ ಗಾಳಿ ಮಳೆಗೆ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು.ಇವರ ಪತಿ ಡೋಲಿವಾದನ ಕಲಾವಿದರಾಗಿದ್ದು,ಅವರು ಕೆಲ ವರ್ಷದ ಹಿಂದೆ ದೈವಾಧೀನರಾಗಿದ್ದರು.ಜಯಂತಿ ಅವರು ಅನಾರೋಗ್ಯ ಪೀಡಿತರಾದ ತಂಗಿ ಮತ್ತು ತಮ್ಮನ ಜೊತೆ ವಾಸವಾಗಿರುವ ತೀರಾ ಈ ಬಡಕುಟುಂಬಕ್ಕೆ ಮನೆ ಕುಸಿದ ಪರಿಣಾಮ ದಿಕ್ಕಿಲ್ಲದಂತಾಗಿತ್ತು.ಈ ಕುಟುಂಬದ ಅಸಹಾಯಕತೆಯನ್ನು ಗಮನಿಸಿದ ಅಡ್ಯಾರ್ ಪಂಚಾಯತ್ ನ ನೌಕರ ಧನಂಜಯ ಹಾಗು ಸಾಮಾಜಿಕ ಕಾರ್ಯಕರ್ತ ಮನೋಜ್ ತುಪ್ಪೆಕಲ್ಲುರವರು ಅಡ್ಯಾರ್ ಗಾರ್ಡನ್ ನ ಮ್ಯಾನೇಜರ್ ದಿವಾಕರ ಶೆಟ್ಟಿ ನಡಿಗುತ್ತು ಮತ್ತು ಸಂಜ್ಯೋತಿ ಶೇಕರವರಿಗೆ ಮನವರಿಕೆ ಮಾಡಿಕೊಟ್ಟು ಮನೆ ಮನೆ ನಿರ್ಮಾಣಕ್ಕೆ ಸಹಕಾರ ಕೋರಿದ್ದರು.

ಅಡ್ಯಾರ್ ಗಾರ್ಡನ್ ಮಾಲಕರಾದ ಕಿಶನ್ ಶೆಟ್ಟಿ ಯವರು ಜಯಂತಿಯವರ ಮನೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕೂಡಲೇ ಪೂರ್ಣ ಮನೆ ನಿರ್ಮಾಣಕ್ಕೆ ೧೦ ಲಕ್ಷ ರೂ.ವಿನ ಆರ್ಥಿಕ ನೆರವನ್ನು ಘೋಷಿಸಿದ್ದರು .
ಇದೀಗ ಮನೆ ನಿರ್ಮಾಣ ಕಾರ್ಯವು ಪೂರ್ಣಗೊಂಡು ಗೃಹ ಪ್ರವೇಶವು ವೈದಿಕರಾದ ಪೊಳಲಿ ಗಿರಿಪ್ರಕಾಶ್ ತಂತ್ರಿಯವರ ಮಾರ್ಗದರ್ಶನದಲ್ಲಿ ನೆರವೇರಿದ್ದು, ಜಯಂತಿಯವರಿಗೆ ಮನೆ ಹಸ್ತಾಂತರ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭ ಕಿಶನ್ ಶೆಟ್ಟಿಯವರ ಪರವಾಗಿ ಅವರ ಬಾವ ಸಂಜ್ಯೋತಿ ಶೇಕ , ಅರ್ಕುಳ ಬೀಡು ವಜ್ರನಾಭ ಶೆಟ್ಟಿ , ಅಡ್ಯಾರ್ ಗಾರ್ಡನ್ ಮ್ಯಾನೇಜರ್ ದಿವಾಕರ ಶೆಟ್ಟಿ ನಡಿಗುತ್ತು , ಅಡ್ಯಾರ್ ಗಾರ್ಡನ್ ನ ಪುರುಷೋತ್ತಮ ಶೆಟ್ಟಿ , ಆರ್ .ಕೆ .ಟ್ರಾವೆಲ್ಸ್ ಮಾಲಕರಾದ ಮಾಧವ ನಾಯ್ಕ್ ಅಡ್ಯಾರ್ , ಮನೀಶ್ ಶೆಟ್ಟಿ ಮೂಡ ಅಡ್ಯಾರ್ ಗುತ್ತು ಉಪಸ್ಥಿತರಿದ್ದರು.ಇದೇ ವೇಳೆ
ಕಿಶನ್ ಶೆಟ್ಟಿ ಯವರ ಪರವಾಗಿ ಸಂಜ್ಯೋತಿ ಶೇಕ ರ ಹಾಗೂ ಸಹಕರಿಸಿದ ದಿವಾಕರ ಶೆಟ್ಟಿ , ಮನೋಜ್ ತುಪ್ಪೆಕಲ್ಲು , ಧನಂಜಯ ತುಪ್ಪೆಕಲ್ಲು ರವರನ್ನು ಗೌರವಿಸಲಾಯಿತು
