ಬಂಟ್ವಾಳ : ಶೌರ್ಯ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ತಂಡದ ಕೆಲಸವು ಸೇವಾ ಮನೋಭಾವದಿಂದ ಕೂಡಿದ್ದು, ಇವರ ಈ ಸೇವೆಯು ದೇಶಸೇವೆಗೆ ಸಮಾನವಾದದು, ಸೈನಿಕನು ಗಡಿಯನ್ನು ರಕ್ಷಿಸಿದರೆ ಸೇವಾ ಮನೋಭಾವವನ್ನು ಹೊಂದಿರುವ ಶೌರ್ಯ ತಂಡದ ಸದಸ್ಯರು ತಮ್ಮ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ತಮ್ಮಸೇವೆಯ ಮೂಲಕ ಸಮಾಜವನ್ನು ಸರಿಪಡಿಸುತ್ತಿದ್ದೀರಿ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಕಮಾಂಡರ್ ಶಾಂತಿಲಾಲ್ ಜಟಿಯ ಹೇಳಿದರು

ಮಂಗಳವಾರ ವಿಟ್ಲ ಅಕ್ಷಯ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ವಿಟ್ಲ, ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂಸೇವಕರ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಟ್ಲ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ರತನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶೌರ್ಯ ತಂಡದ ಸದಸ್ಯರು ವಿಪತ್ತು ನಿರ್ವಹಣಾ ಸಂದರ್ಭದಲ್ಲಿ ತಮ್ಮ ಜೀವದ ಸುರಕ್ಷತೆ ಬಗ್ಗೆ ವಿಶೇಷ ಗಮನ ದಲ್ಲಿಟ್ಟು ಕಾರ್ಯ ಮಾಡಬೇಕಲ್ಲದೆ ತಮ್ಮ ಗ್ರಾಮದಲ್ಲಿ ನಡೆಯುವ ಸಮಾಜ ವಿರೋಧಿ ಕೆಲಸಗಳನ್ನು ತಡೆಗಟ್ಟುವಲ್ಲಿ ಪೊಲೀಸ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಗ್ರಾಮಾಭಿವೃದ್ಧಿ ಯೋಜನೆ ದಕ್ಷಿಣ ಕನ್ನಡ ಜಿಲ್ಲಾ ಒಂದರ ನಿರ್ದೇಶಕ ಬಾಬು ನಾಯ್ಕ್ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ರಚನೆಯ ಉದ್ದೇಶ ಹಾಗೂ ಅದರ ಕಾರ್ಯ ಸ್ವರೂಪಗಳ ಬಗ್ಗೆ ಮಾಹಿತಿ ನೀಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ರಾಜಾರಾಮ್ ಶೆಟ್ಟಿ, ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷ ನವೀನ್ ಚಂದ್ರ, ಗೌಡರ ಯಾನೆ ಒಕ್ಕಲಿಗರ ಸಂಘ ಅಧ್ಯಕ್ಷ ಕುಶಾಲಪ್ಪ ಗೌಡ, ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿ ಹರೀಶ್, ಶೌರ್ಯ ವಿಪತ್ತು ನಿರ್ವಹಣಾ ವಿಭಾಗದ ಯೋಜನಾಧಿಕಾರಿ ಜೈವಂತ್ ಪಟಗಾರ, ಕಾಸರಗೋಡು ತಾಲೂಕು ಯೋಜನಾಧಿಕಾರಿ ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ಸುಭಾಷ್ ಶಿಂಧೆ ನೇತೃತ್ವದ ತಂಡದಿಂದ ತುರ್ತು ಸಂದರ್ಭದಲ್ಲಿ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಪ್ರಾತ್ಯಕ್ಷತೆಗಳ ಮೂಲಕ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ವಿಟ್ಲ, ಕಾಸರಗೋಡು, ಮಂಜೇಶ್ವರ, ಯೋಜನಾ ಕಚೇರಿ ವ್ಯಾಪ್ತಿಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಮಾಸ್ಟರ್ ಹಾಗೂ ಕ್ಯಾಪ್ಟನ್ ಗಳನ್ನು ಆಯ್ಕೆ ಮಾಡಲಾಯಿತು
ವಿಟ್ಲ ಯೋಜನಾಧಿಕಾರಿ ಸುರೇಶ್ ಗೌಡ ಸ್ವಾಗತಿಸಿ, ಮಂಜೇಶ್ವರ ತಾಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ ವಂದಿಸಿದರು. ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ ಕಾರ್ಯಕ್ರಮ ನಿರೂಪಿಸಿದರು.
