ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಶ್ರೀ ಶರಭೇಶ್ವರ ಭಜನಾ ಮಂಡಳಿಯ ಆಯೋಜನೆಯಲ್ಲಿ ಭಜನಾಪಟು ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ವಿತರಣೆ ಹಾಗೂ ಬಾಲ ಸಂಸ್ಕಾರ ಕಾರ್ಯಕ್ರಮ ರವಿವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಪುರೋಹಿತ ವೇ.ಮೂ.ವಿಜಯಕೃಷ್ಣ ಐತಾಳ್ ಪುಂಜೂರು ಮಾತನಾಡಿ, ವಿದ್ಯೆ ಇದ್ದಾಗ ಮಕ್ಕಳಿಗೆ ವಿನಯ ಬರಲಿದ್ದು, ಅದರಿಂದ ಸಮಾಜದಲ್ಲಿ ಗೌರವೂ ಸಿಗುತ್ತದೆ. ಪುರಾತನ ಭಾರತದಲ್ಲೇ ಶಿಕ್ಷಣಕ್ಕೆ ವಿಶೇಷ ಮಹತ್ವವಿದ್ದು, ಹಾದಿ ತಪ್ಪಿದ ವ್ಯವಸ್ಥೆಯನ್ನು ಸರಿ ದಾರಿಗೆ ತರಲು ಧರ್ಮ ಶಿಕ್ಷಣ ಅತಿ ಅಗತ್ಯವಾಗಿದೆ ಎಂದರು.

ಸನಾತನ ಧರ್ಮ ಶಿಕ್ಷಣದ ಡಾ.ವಿನಯಕುಮಾರ್ ಉಪನ್ಯಾಸ ನೀಡಿ, ಧರ್ಮ ಶಿಕ್ಷಣದ ಕೊರತೆಯ ಕಾರಣಕ್ಕೆ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದ್ದು, ಅಂತಹ ಶಿಕ್ಷಣ ದೊರೆತಾಗ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ನಮ್ಮ ಒತ್ತಡದ ಬದುಕಿನಿಂದ ಮುಕ್ತಿ ಪಡೆಯಲು ಕುಲ ದೇವರ ಆರಾಧನೆ, ಭಗವಂತನ ದರ್ಶನ ಅತಿ ಅಗತ್ಯ ಎಂದರು.
ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯ ವಿಠಲ್ ಎಂ.ಆರುಮುಡಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ಬೋಧನೆಯ ಕಾರ್ಯ ಮನೆಯಿಂದಲೇ ಆರಂಭಗೊಳ್ಳಬೇಕಿದ್ದು, ಅವರನ್ನು ಮೊಬೈಲ್ ನಿಂದ ದೂರ ಇಟ್ಟು ಆಟದ ಜತೆಗೆ ಇತರ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಬೇಕಿದೆ ಎಂದರು.
ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯ ಚಂದ್ರಹಾಸ ಶೆಟ್ಟಿ ಹೊಳ್ಳರಗುತ್ತು, ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಚೇತನ್ ಬಜ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ರಾಧಾಕೃಷ್ಣ ರೈ ಕೊಟ್ಟುಂಜ ಸ್ವಾಗತಿಸಿದರು. ಚಿಂತನ್ ದೇವಾಡಿಗ ವರದಿ ವಾಚಿಸಿದರು. ಯೋಗೀಶ್ ನೀರಪಲ್ಕೆ ವಿದ್ಯಾರ್ಥಿಗಳ ವಿವರ ನೀಡಿದರು. ಭಜನಾ ಸಮಿತಿಯ ಸಂಚಾಲಕಿ ರೋಹಿಣಿ ಮೋಹನ್ ಕಾರ್ಯಕ್ರಮ ನಿರ್ವಹಿಸಿದರು.
