ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಬಂಟ್ವಾಳ ಘಟಕದ ತೃತೀಯ ವಾರ್ಷಿಕೋತ್ಸವವು ಬಿ. ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ಬುಧವಾರ ರಾತ್ರಿ ನಡೆಯಿತು. ಬಂಟ್ವಾಳ ಘಟಕದ ಅಧ್ಯಕ್ಷರಾದ ದಿವಾಕರ ಶೆಟ್ಟಿ ಪರಾರಿಗುತ್ತು ಅವರು ಅಧ್ಯಕ್ಷತೆ ವಹಿಸಿದ್ದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಮೇ 30ರಂದು ನಡೆಯುವ ಪಟ್ಲ ಸಂಭ್ರಮದ ಕುರಿತು ಮಾಹಿತಿಯನ್ನು ಹಂಚಿಕೊಂಡರು.

ಇದೇ ವೇಳೆ ಹಿರಿಯ ಯಕ್ಷಗಾನ ಕಲಾವಿದರಾದ ಸರಪಾಡಿ ಅಶೋಕ್ ಶೆಟ್ಟಿ ಹಾಗೂ ಶ್ರೀ ಕ್ಷೇತ್ರ ಬಾಚಕೆರೆಯ ಧರ್ಮದರ್ಶಿ,ಕಲಾಪೋಷಕರಾದ ದೇಜಪ್ಪ ಬಾಚಕೆರೆ ಅವರನ್ನು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅವರು
ಕಲೆಯನ್ನು ಪೋಷಿಸುತ್ತಿರುವ ಅಭಿಮಾನಿಗಳು, ಪ್ರೇಕ್ಷಕರು ಇರುವವರೆಗೆ ಕಲಾವಿದರು ಇರುತ್ತಾರೆ, ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರ ಸಮಸ್ಯೆಗಳನ್ನು ಗುರುತಿಸಿ ಅವರಿಗೆ ನೆರವು ನೀಡುವ ಕಾರ್ಯವನ್ನು ಮಾಡುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಅಗ್ರಜ ಬಿಲ್ಡರ್ಸ್ ಮಾಲೀಕರಾದ ಸಂದೇಶ್ ಶೆಟ್ಟಿ ಅರೆಬೆಟ್ಟು, ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಹಾಗೂ ಪಟ್ಲ ಫೌಂಡೇಶನ್ ಬಂಟ್ವಾಳ ಘಟಕ ಸಂಚಾಲಕ ಭುವನೇಶ್ ಪಚ್ಚಿನಡ್ಕ, ಗೌರವಾಧ್ಯಕ್ಷ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ, ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ, ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಮತ್ತು ಘಟಕದ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಂಟ್ವಾಳ ಘಟಕದ ಅಧ್ಯಕ್ಷರಾದ ದಿವಾಕರ ಶೆಟ್ಟಿ ಪರಾರಿಗುತ್ತು ಸ್ವಾಗತಿಸಿದರು. ಬಿ. ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು. ಬೊಂಡಾಲ ಚಿತ್ತರಂಜನ ಶೆಟ್ಟಿ ಮತ್ತು ಸತೀಶ್ ಶೆಟ್ಟಿ ಮೊಡಂಕಾಪು ಅವರು ಸನ್ಮಾನಪತ್ರ ವಾಚಿಸಿದರು. ಪಾವಂಜೆ ಮೇಳದವರಿಂದ “ಛಾಯಾನಂದನ”ಯಕ್ಷಗಾನ ಬಯಲಾಟ ಜರುಗಿತು.
