ಬಂಟ್ವಾಳ: ಕಲ್ಲಡ್ಕ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ೭ನೇ ತರಗತಿಯ ಬೀಳ್ಕೊಡುಗೆ “ದೀಪಪ್ರದಾನ” ಕಾರ್ಯಕ್ರಮ ನಡೆಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೀಪ ಪ್ರಜ್ವಲಿಸಿ ಭಾರತಮಾತೆಗೆ ಪುಷ್ಪಾರ್ಚನೆಗೈದ ಬೆಂಗಳೂರು ಮಣಿಪಾಲ ಪೌಂಡೇಶನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿನಾರಾಯಣ ಶರ್ಮ ಮಾತನಾಡಿ,ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿರುವ ವಿದ್ಯಾಕೇಂದ್ರದ ಕಾರ್ಯಚಟುವಟಿಕೆಯನ್ನು ಶ್ಲಾಘಿಸಿದರಲ್ಲದೆ ಖುಷಿಯಾಯಿತು.ಈ ರೀತಿಯಾಗಿ ಮಕ್ಕಳಿಗೆ ಸಂಸ್ಕಾರದ ಜೊತೆಯಲ್ಲಿ ಶಿಕ್ಷಣ ದೊರೆಯುವ ಶಾಲೆಯನ್ನು ಎಲ್ಲಿಯು ಖಂಡಿಲ್ಲ,ದೇಶವೇ ಮೊದಲು ಎಂಬುದನ್ನು ಯೋಚಿಸಿಕೊಂಡು ಜೀವನದಲ್ಲಿ ಮುಂದಡಿಯಿಡುವಂತೆ ಮಕ್ಕಳಿಗೆ ಶುಭ ಹಾರೈಸಿದರು.

ಪರಂಪರಾ ವಿದ್ಯಾಪೀಠಂ ಅಲಕೋಡೆ ಕೇರಳಂ, ಬೇಕಲ ಗೋಕುಲಂ ಗೋಶಾಲಾ ಸ್ಥಾಪಕರಾದ ಜ್ಯೋತಿಷಿ ವಿಷ್ಣುಪ್ರಸಾದ್ ಹೆಬ್ಬಾರ್ ಅವರು ಮಾತನಾಡಿ,ಜೀವನದ ಆಧಾರ ಶಿಲೆ ವಿದ್ಯೆ. ಭಾರತೀಯ ಸಂಸ್ಕೃತಿ, ಭಾಷೆ , ವಿದ್ಯೆ ನಮ್ಮಲ್ಲಿರಬೇಕು. ಮಾತೃ ಭಾಷೆಯಲ್ಲಿ ದೊರೆಯುವ ಸ್ವಾತಂತ್ರ್ಯ ಬೇರೆ ಭಾಷೆಯಲ್ಲಿ ಬರಲು ಸಾಧ್ಯವಿಲ್ಲ. ಶ್ಲೋಕಗಳನ್ನು ಪಠಣ ಮಾಡುವುದರಿಂದ ಸಂಸ್ಕಾರ ಸಿಗುತ್ತದೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಅವರು ಮಾತನಾಡಿ “ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡಬೇಕು. ಭಾರತೀಯರಾಗಿಯೇ ಇರಬೇಕು ಎಂಬ ಉದ್ದೇಶದಿಂದ ಈ ಶಾಲೆ ಪ್ರಾರಂಭವಾಯಿತು. ಶಿಕ್ಷಣದ ಜೊತೆಯಲ್ಲಿ ಸಂಸ್ಕಾರವನ್ನು ಜೋಡಿಸಿಕೊಳ್ಳುವುದು ನಮ್ಮತನವನ್ನು ರೂಪಿಸುವಂತದ್ದು, ಮೊದಲು ಸಂಸ್ಕಾರ ಕೊಡುವವಳು ತಾಯಿ. ನಮ್ಮ ಮಾತೃ ಭಾಷೆಯಲ್ಲಿ ಶಿಕ್ಷಣ ದೊರೆತಾಗ ನಮ್ಮ ಸಂಸ್ಕಾರ ಗಟ್ಟಿಯಾಗುತ್ತದೆ ಎಂದರು.

ಮೊದಲಿಗೆ ೭ನೇ ತರಗತಿಯ ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆಗೈದು, ತಿಲಕಧಾರಣೆ ಮಾಡಿಸಿ, ಹಿರಿಯರಿಂದ ಆರ್ಶೀವಾದ ಪಡೆದುಕೊಂಡರು. ೬ನೇ ವಿದ್ಯಾರ್ಥಿಗಳು ೭ನೇ ತರಗತಿ ವಿದ್ಯಾರ್ಥಿಗಳಿಗೆ ಪುಷ್ಪ ಪ್ರಧಾನ ಮಾಡಿದರು. ೭ನೇ ತರಗತಿಯ ವಿದ್ಯಾರ್ಥಿಗಳು ಈ ವಿದ್ಯಾ ದೇಗುಲದಲ್ಲಿ ತಾವು ಕಳೆದ ಕ್ಷಣಗಳ ಸವಿ ನೆನಪುಗಳನ್ನು ಹಂಚಿಕೊಂಡರು. ೬ನೇ ತರಗತಿಯ ವಿದ್ಯಾರ್ಥಿಯಾದ ಭೂಮಿಕಾ ಪ್ರೇರಣಾ ಗೀತೆಯನ್ನು ಹಾಡಿದರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು. ದೀಪ ಎಂದರೆ ಶಾಂತಿ, ಸಮೃದ್ಧಿ, ಬೆಳಕು, ಆರೋಗ್ಯ, ಪ್ರಖರತೆ. ಹೀಗೆ ದೀಪ ಜೀವನದ ಒಂದು ಸಕಾರಾತ್ಮಕ ಬೆಳವಣಿಗೆ . ಅದು ಜ್ಞಾನದ ಸಂಕೇತವೂ ಹೌದು. ಇಂತಹ ದೀಪವು ಪ್ರತಿಯೊಬ್ಬರ ಜೀವನಕ್ಕೊಂದು ಸಂತೋಷ, ನೆಮ್ಮದಿ , ಶಾಂತಿಯನ್ನು ತರಲಿ ಎಂದು ಆಶಿಸುತ್ತಾ ೭ನೇ ತರಗತಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ದೀಪ ಪ್ರದಾನ ಮಾಡಿದರು.
ಇದೇ ವೇಳೆ ೭ನೇ ತರಗತಿಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಡೆಸ್ಕ್, ಬೆಂಚ್‌ಗಳನ್ನು ಕೊಡುಗೆಯಾಗಿ ನೀಡಿದರು.

ವೇದಿಕೆಯಲ್ಲಿ ಉಡುಪಿ ಏಸ್‌ಕ್ರೀಟ್ ಅಡಿಷನ್ಸ್ ಇಂಡಿಯಾ ಪ್ರೈ.ಲಿ ನ ನಿರ್ದೇಶಕರಾದ ಸಂದೀಪ್ ಶೆಟ್ಟಿ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ರಾಷ್ಟ್ರ ಸೇವಿಕ ಸಮಿತಿಯ ದಕ್ಷಿಣ ಪ್ರಾಂತದ ಮಾರ್ಗದರ್ಶಿ ಮಂಡಳಿಯ ಸದಸ್ಯೆ ಡಾ | ಕಮಲಾ ಪ್ರಭಾಕರ್ ಭಟ್, ಶ್ರೀರಾಮ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರ್ ಕಟ್ಟೆ, ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಪ್ರಾಪ್ತಿ ಸ್ವಾಗತಿಸಿ, ಸದ್ವಿ ಕಾರ್ಯಕ್ರಮ ನಿರೂಪಿಸಿ, ಪ್ರಣಮ್ಯ ವಂದಿಸಿದರು.
