ಗುರುಪುರ : ಮೂಡುಶೆಡ್ಡೆಯ ಶಾರದಾ ಶುಭೋದಯ ವಿದ್ಯಾಲಯದ ೮ನೇ ತರಗತಿ ವಿದ್ಯಾರ್ಥಿ ಯಜತ್ ಎನ್. ಕೋಟ್ಯಾನ್ ಗುರುಪುರ ಅವರು ಬೆಂಗಳೂರಿನಲ್ಲಿ ನಡೆದ ಅಂಡರ್ ೧೪ ವಿಭಾಗದ ರಾಜ್ಯ ಮಟ್ಟದ ಶಾಟ್‌ಪುಟ್, ೨೦೦ ಮೀ. ರನ್ನಿಂಗ್, ೮೦ ಮೀ. ಹರ್ಡಲ್ಸ್ ಹಾಗೂ ೪*೧೦೦ ರಿಲೇಯಲ್ಲಿ ಪ್ರಥಮ ಸ್ಥಾನದೊಂದಿಗೆ ೪ ಚಿನ್ನದ ಪದಕ ಗಳಿಸಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆಗೈದ ಈತ, ಮಂಗಳೂರು ದಸರಾ ಕ್ರೀಡೋತ್ಸವದಲ್ಲೂ ಮೂರು ಪದಕ ಗಳಿಸಿ ಮಿಂಚಿದ್ದ. ವಿದ್ಯಾಭಾರತಿ ಸ್ಕೂಲ್ ಪ್ರಾಯೋಜಿತ ರಾಜ್ಯ ಮಟ್ಟದ ಕ್ರೀಡಾಕೂಟವು ಅ. ೪ ಮತ್ತು ೫ರಂದು ಬೆಂಗಳೂರಿನ ಚೆನ್ನನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದಲ್ಲಿ ನಡೆದಿದೆ. ವಲಯ ಮಟ್ಟಕ್ಕೆ ಆಯ್ಕೆಯಾಗಿರುವ ಇವರು ಮುಂದಿನ ಸುತ್ತಿನಲ್ಲಿ ಅ. ೬-೭ರಂದು ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯದ ಕ್ರೀಡಾಳುಗಳಿಗೆ ಪ್ರತಿಸ್ಪರ್ಧೆ ನೀಡಲಿದ್ದಾರೆ.
ಗುರುಪುರ ಮರಂಕರಿಯದ ನಿತಿನ್ ಕೋಟ್ಯಾನ್ ಮತ್ತು ತಾರಾ ಎನ್. ಕೋಟ್ಯಾನ್ ದಂಪತಿಯ ಪುತ್ರರಾದ ಯಜತ್‌ಗೆ ಶಾರದಾ ಶುಭೋದಯ ವಿದ್ಯಾಲಯದ ದೈಹಿಕ ಶಿಕ್ಷಕರಾದ ಪೂರ್ಣಿಮಾ ಆರ್., ಮತ್ತು ಲೋಹಿತ್ ಅವರು ತರಬೇತಿ ನೀಡುತ್ತಿದ್ದಾರೆ. ಯಜತ್ ಕೋಟ್ಯಾನ್ `ನಮ್ಮ ಶಾಲೆಯ ಗೋಲ್ಡನ್ ಬಾಯ್’ ಎಂದು ಶಾಲಾ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.
