ಬಂಟ್ವಾಳ: ವಿದ್ಯಾರ್ಥಿಗಳು ಸಮಾಜಮುಖಿ ಹಾಗೂ ಸದಾ ಕ್ರಿಯಾತ್ಮಕವಾಗಿರಲು ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳು ಸಹಕಾರಿಯಾಗುತ್ತವೆ ಎಂದು ಬಂಟ್ವಾಳ ವಿದ್ಯಾಗಿರಿ ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುದರ್ಶನ್ ಬಿ. ನುಡಿದರು.

ರಾಷ್ಟ್ರೀಯ ಸೇವಾ ಯೋಜನಾ ಘಟಕ, ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು, ಬಂಟ್ವಾಳ ಇವರು ಆಯೋಜಿಸಿದ್ದ ೨೦೨೫-೨೬ನೇ ಸಾಲಿನ ಎನ್.ಎಸ್.ಎಸ್. ಚಟುವಟಿಕೆಗಳ ಹಾಗೂ ‘ಸ್ವಚ್ಛತಾ ಹಿ ಸೇವಾ’ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಎಂ.ಡಿ.ಮಂಚಿರವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ, ರಾಜ್ಯ, ರಾಷ್ಟ್ರಮಟ್ಟದವರೆಗೂ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶಗಳಿವೆ ಎಂದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶಿವಣ್ಣಪ್ರಭು, ಎನ್.ಎಸ್.ಎಸ್. ಘಟಕ ನಾಯಕರಾದ ಕು.ಕರಿಷ್ಮಾ ಮತ್ತು ಅಮಿತ್ ಪ್ರಭು ಉಪಸ್ಥಿತರಿದ್ದರು.
ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ.ಕಾಶೀನಾಥ ಶಾಸ್ತ್ರೀ ಸ್ವಾಗತಿಸಿ, ಸಹಾಯಕ ಕಾರ್ಯಕ್ರಮಾಧಿಕಾರಿ ಮಹೇಶ್ ಗೌಡ ವಂದಿಸಿದರು. ಸಹಾಯಕ ಕಾರ್ಯಕ್ರಮಾಧಿಕಾರಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು, ಕು.ಆಶಾಲತಾ ಸಂಗಡಿಗರು ಪ್ರಾರ್ಥಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ‘ಸ್ವಚ್ಛತಾ ಹಿ ಸೇವಾ’ ಅಭಿಯಾನದ ಪ್ರಯುಕ್ತ ಕಾಲೇಜು ಉದ್ಯಾನವನ್ನು ಎನ್.ಎಸ್.ಎಸ್. ಸ್ವಯಂಸೇವಕರು ಸ್ವಚ್ಛಗೊಳಿಸಿದರು.
