ಬಂಟ್ವಾಳ:ಬಿ.ಸಿ.ರೋಡಿನ ರೈಲ್ವೇ ನಿಲ್ದಾಣದ ಬಳಿ ಹೊಸದಾಗಿ ನಿರ್ಮಾಣವಾಗುವ ಆಟೋರಿಕ್ಷಾ ತಂಗುದಾಣದಲ್ಲಿ ಪರವಾನಿಗೆ ಹೊಂದಿರುವ ರಿಕ್ಷಾಕ್ಕೆ ಮಾತ್ರ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಭಾರತೀಯ ಮಜ್ದೂರು ಸಂಘದ ಬಂಟ್ವಾಳ ಆಟೋರಿಕ್ಷಾ ಚಾಲಕ,ಮಾಲಕರ ಶಾಖೆಯ ವತಿಯಿಂದ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಲಾಯಿತು.

ಸೋಮವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಬಿ.ಸಿ.ರೋಡಿನಲ್ಲಿರುವ ಕಚೇರಿಯಲ್ಲಿ ಸಂಸದರನ್ನು ಬಿಎಂಎಸ್ ರಿಕ್ಷ ಚಾಲಕ ,ಮಾಲಕರ ಸಂಘದ ಅಧ್ಯಕ್ಷ ವಿಶ್ವನಾಥ ಚಂಡ್ತಿಮಾರ್ ಅವರ ನೇತೃತ್ವದ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಿತು.
ಮಂಗಳೂರು ರೈಲ್ವೇ ನಿಲ್ದಾಣದಲ್ಲಿರುವ ಪಾರ್ಕಿಂಗ್ ಮಾದರಿಯಲ್ಲಿಯೇ ಬಿ.ಸಿ.ರೋಡು ರೈಲ್ವೇ ನಿಲ್ದಾಣದಲ್ಲು ರಿಕ್ಷಾ ಪಾರ್ಕಿಂಗ್ ವ್ಯವಸ್ಥೆಯನ್ನು ಅನುಸರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘದ ಪದಾಧಿಕಾರಿಗಳು, ಚಾಲಕರು, ಮಾಲಕರು ಉಪಸ್ಥಿತರಿದ್ದರು
