ಬಂಟ್ವಾಳ : ಕೃಷಿ ಜಮೀನಿಗೆ ಕೊಳವೆ ಬಾವಿ ನಿರ್ಮಿಸಿ ಕೊಡಲು ಲಂಚ ಕೈ ಯೊಡ್ಡಿದ ವೇಳೆ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ  ನಫೀಸಾ ಹಾಗೂ ಬಿಲ್ ಕಲೆಕ್ಟರ್ ವಿಲಯಂ ಅವರು ಶನಿವಾರ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.


ಸರ್ಕಾರದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ  ಕೊಳವೆ ಬಾವಿಯನ್ನು  ಮಾಡಿಕೊಡುವಂತೆ 75 ವರ್ಷದ ಹಿರಿಯರೊಬ್ಬರು 2024ರಲ್ಲಿ ಪೆರುವಾಯಿ ಗ್ರಾ ಪಂ ಪಿಡಿಒ ಅವರಿಗೆ ಅರ್ಜಿ ಸಲ್ಲಿಸಿದ್ದರು.


ಪೆರುವಾಯಿ ಗ್ರಾಮ ಪಂಚಾಯತ್ ಅಧಿಕಾರಿಗಳು ಸತಾಯಿಸಿದರೂ  ದೂರುದಾರರ ಹೆಸರನ್ನು ಕೊಳವೆ ಬಾವಿ ಪಟ್ಟಿಯಲ್ಲಿ ಸೇರಿಸಿರುವುದಿಲ್ಲ. ಬಳಿಕ  2025ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಸರಕಾರ ಕೃಷಿಕರಿಗೆ ಕೊಳವೆ ಬಾವಿ ಮಾಡಿಕೊಡುತ್ತಿರುವ ಕುರಿತು ತಿಳಿದು ದೂರುದಾರರು ಮತ್ತೆ 2025 ರ ಮೇ ತಿಂಗಳಲ್ಲಿ ಕೊಳವೆ ಬಾವಿಗೆ ಅರ್ಜಿ ಸಲ್ಲಿಸಿದ್ದಾರೆ.ದೂರುದಾರರಿಗೆ  75 ವರ್ಷ ವಯಸ್ಸಾಗಿದ್ದು, ಅವರಿಗೆ ಅಸೌಖ್ಯ ದಿಂದ ನಡೆದಾಡಲು‌ಸಾಧ್ಯವಾಗದ ಹಿನ್ನಲೆಯಲ್ಲಿ‌ ಅವರ ಪತ್ನಿ  ಪೆರುವಾಯಿ ಗ್ರಾಮ ಪಂಚಾಯತ್ ಕಛೇರಿಗೆ 2-3 ಬಾರಿ ಅಲೆದಾಡಿದರೂ ಸ್ಪಂದಿಸಿರಲಿಲ್ಲ‌ಮನವಿ ಮಾಡಿದ್ದರು.


ಪಂಚಾಯತ್ ಕಛೇರಿಗೆ ಎರಡು ಮೂರು ಬಾರಿ ಹೋಗಿ ವಿಚಾರಿಸಿದರೂ ನಿರ್ಲಕ್ಷ ವಹಿಸಿ ಹಣಕ್ಕಾಗಿ ಪೀಡಿಸಿದ್ದರು.
ಈ ನಡುವೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ನೆಫಿಸ್ಸಾ ರವರಲ್ಲಿ ತನ್ನ ಮಾವನವರ ಹೆಸರಿಗೆ ಕೊಳವೆ ಬಾವಿ ಮಂಜೂರು ಆಗಿದೆಯೇ ಎಂಬ ಬಗ್ಗೆ ದೂರುದಾರರು ವಿಚಾರಿಸಿದಾಗ “ನಿಮಗೆ ಬೋರ್‌ವೆಲ್ ಫ್ರೀ ಆಗುತ್ತದೆ, ಬೆಂಗಳೂರು ಆಫೀಸ್‌ಗೆ ಹತ್ತು ಸಾವಿರ ಕೊಡ್ಲಿಕ್ಕೆ ಇದೆ, ಹಣ ಕೊಟ್ಟರೆ ಅವರು ಪಾಸ್ ಮಾಡುತ್ತಾರೆ, ತಾನು ಬೆಂಗಳೂರಿಗೆ ಹೋಗಿ ನಿಮ್ಮ ಕೆಲಸ ಮಾಡಿಸುತ್ತೇನೆ, ಹಣ ತಗೊಂಡು ಬನ್ನಿ, ನೀವು ಹಣ ಕೊಟ್ಟರೆ ಮಾತ್ರ ನಿಮಗೆ ಬೋರ್‌ವೆಲ್ ಪಾಸ್ ಮಾಡಿಸಿ ಕೊಡುತ್ತೇನೆ’ ಎಂದು ಹೇಳಿದ್ದರು.

ಶನಿವಾರ  ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಫೀಸಾ ಅವರು ಪಂಚಾಯತ್ ಬಿಲ್ ಕಲೆಕ್ಟರ್ ವಿಲಿಯಂ ಅವರಿಗೆ ದೂರುದಾರರಿಂದ 10 ಸಾವಿರ ರೂಪಾಯಿ ಲಂಚದ ಹಣವನ್ನು ಪಡೆದುಕೊಳ್ಳಲು ಸೂಚಿಸಿದಂತೆ ಅವರು 10 ಸಾವಿರ ರೂಪಾಯಿ ಲಂಚದ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪಂಚಾಯತ್ ಅಧ್ಯಕ್ಷೆ ನಫಿಸ್ಸಾ ಹಾಗೂ ಬಿಲ್ ಕಲೆಕ್ಟರ್ ವಿಲಿಯಂ ಅವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣಾ ಡಿವೈಎಸ್ಪಿಗಳಾದ ಡಾ ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ,  ಇನ್ಸ್ ಪೆಕ್ಟರ್ ಗಳಾದ  ಭಾರತಿ ಜಿ, ಚಂದ್ರಶೇಖರ್ ಕೆ ಎನ್, ರವಿ ಪವಾರ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. 

By suddi9

Leave a Reply

Your email address will not be published. Required fields are marked *