ಬಂಟ್ವಾಳ:ಮಂಗಳೂರು,ಬಂಟ್ವಾಳ,ಪುತ್ತೂರು, ಸುಳ್ಯ,ಬೆಳ್ತಂಗಡಿ,ಮೂಡಬಿದ್ರೆ ಈ ಆರು ತಾಲೂಕಿನ ವಕೀಲರ ಸಂಘಗಳ ಒಗ್ಗೂಡುವಿಕೆಯಲ್ಲಿ ವಕೀಲರ ನೂತನ “ದ.ಕ.ಜಿಲ್ಲಾ ಬಾರ್ ಅಸೋಸೊಯೇಷನ್ ” ಸಂಸ್ಥೆ ಗುರುವಾರ ಬಂಟ್ವಾಳದಲ್ಲಿ ಅಸ್ತಿತ್ವಕ್ಕೆ ಬಂದಿದೆ.

ಗುರುವಾರ ಬಿ.ಸಿ.ರೋಡಿನಲ್ಲಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್.ವಿ.ಅವರ ಅಧ್ಯಕ್ಷತೆಯಲ್ಲಿ ನಡೆದ ಆರು ತಾಲೂಕಿನ ವಕೀಲರ ಸಂಘದ ಪದಾಧಿಕಾರಿಗಳ ಸಮಾಲೋಚನೆ ಸಭೆಯ ಬಳಿಕ ದ.ಕ.ಜಿಲ್ಲಾ ಬಾರ್ ಅಸೋಸಿಯೇಷನ್ ನನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ರಿಚಡ್೯ ಎಂ.ಕೋಸ್ತ ಸ್ಥಾಪಕಾಧ್ಯಕ್ಷ:
ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷರಾದ ರಿಚಡ್೯ ಎಂ.ಕೋಸ್ತ ಅವರು ದ.ಕ.ಜಿಲ್ಲಾ ಬಾರ್ ಅಸೋಸಿಯೇಷನ್ ನ ಸ್ಥಾಪಕ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದನ್ನು ಬಳಿಕ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಲಾಯಿತು.
ಉಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಭಂಡಾರಿ ಮೂಡಬಿದ್ರೆ, ನವೀನ್ ಬಿ.ಕೆ. ಜತೆಕಾರ್ಯದರ್ಶಿ, ಎಚ್ .ವಿ.ರಾಘವೇಂದ್ರ ಮಂಗಳೂರು,ಸುಕುಮಾರ್ ಕೊಡ್ತುಗುಳಿ ಸುಳ್ಯ,ವಸಂತ ಮರಕಡ ಬೆಳ್ತಂಗಡಿ,ಜಗನ್ನಾಥ ರೈ ಪುತ್ತೂರು,ಹರೀಶ್ ಪಿ.,ಮೂಡಬಿದ್ರೆ ಅವರು ಉಪಾಧ್ಯಕ್ಷರಾಗಿರುತ್ತಾರೆ.
ಜೆಸಿಂತಾ ಕ್ರಾಸ್ತಾ ಬಂಟ್ವಾಳ ಅವರು ಕೋಶಾಧಿಕಾರಿಯಾಗಿದ್ದು, ಉಳಿದಂತೆ ಜಿಲ್ಲೆಯ ವಿವಿಧ ತಾಲೂಕಿನ ವಕೀಲರ ಸಂಘಗಳ ಪದಾಧಿಕಾರಿಗಳ ನ್ನೊಳಗೊಂಡಂತೆ 21 ಮಂದಿಯ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿ ಒಟ್ಟು 30 ಮಂದಿಯ ತಂಡ ರಚಿಸಲಾಗಿದೆ.
ದ.ಕ.ಜಿಲ್ಲಾ ಬಾರ್ ಅಸೋಸಿಯೇಷನ್ ಮೂಲಕ ಜಿಲ್ಲೆಯ ವಕೀಲರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುವುದು, ಮಂಗಳೂರಿನಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಯ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟದಲ್ಲಿ ತೊಡಗಿಸಿಕೊಳ್ಳುವುದೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್.ವಿ.ಅವರು ತಿಳಿಸಿದ್ದಾರೆ.
ಮಂಗಳೂರು ಸಚಿವ ಸಂಪುಟದಲ್ಲಿ ಹೈಕೋಟ್೯ ಸಂಚಾರಿ ಪೀಠ ಸ್ಥಾಪನೆ ಘೋಷಣೆಗೆ ಆಗ್ರಹ:
ಬೌಗೋಳಿಕವಾಗಿ ಎಲ್ಲಾರೀತಿಯ ಮೂಲಭೂತ ಸೌಕರ್ಯವನ್ನು ಹೊಂದಿರುವ ಮಂಗಳೂರಿನಲ್ಲಿ ಸಂಚಾರಿ ಹೈಕೋಟ್೯ ಪೀಠ ಸ್ಥಾಪಿಸಬೇಕೆಂಬುದು ಬಹುಕಾಲದ ಬೇಡಿಕೆಯಾಗಿದ್ದು,ಈ ನಿಟ್ಟಿನಲ್ಲಿ ವಿವಿಧ ಹೋರಾಟ,ಜಿಲ್ಲೆಯ ಜನಪ್ರತಿನಿಧಿಗಳ ಮೂಲಕ ಕಾನೂನು ಸಚಿವರಾದಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಗಮನಸೆಳೆಯಲಾಗಿದ್ದು,ಮುಂದೆ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟದಲ್ಲಿ ಸಂಚಾರಿ ಹೈಕೋಟ್೯ ಪೀಠ ಸ್ಥಾಪನೆಯ ಬಗ್ಗೆ ಘೋಷಿಸಬೇಕು ಎಂದು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ದ.ಕ.ಜಿಲ್ಲಾ ಬಾರ್ ಅಸೋಸೊಯೇಶನ್ ಆಗ್ರಹಿಸಿದೆ.
ಸಂಚಾರಿ ಹೈಕೋಟ್೯ ಪೀಠ ಸ್ಥಾಪನೆಯ ಕುರಿತಾಗಿ ಈಗಾಗಲೇ ರಾಜಕೀಯ ರಹಿತವಾದ ಹೋರಾಟ ಸಮಿತಿ ರಚಿಸಲಾಗಿದ್ದು,ಸಮಿತಿ ಸಂಚಾಲಕ ವಿ.ಪ.ಸದಸ್ಯ ಐವಾನ್ ಡಿಸೋಜ ಹಾಗೂ ಮಂಗಳೂರು ಬಾರ್ ಅಸೋಸಿಯೇಷನ್ ಸದಸ್ಯ,ಸ್ಪೀಕರ್ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ಕಾನೂನು ಸಚಿವರು, ಗೃಹಸಚಿವರು,ಜಿಲ್ಲಾ ಉಸ್ತುವಾರಿ ಸಚಿವರು, ಸಿಎಂ ಸಹಿತ ಎಲ್ಲರನ್ನು ಭೇಟಿಯಾಗಿ ಒತ್ತಡ ಹಾಕಲಾಗಿದೆ.
ಅಧಿವೇಶನದಲ್ಲು ಶಾಸಕರಾದ ಹರೀಶ್ ಪೂಂಜಾ,ವೇದವ್ಯಾಸ್ ಕಾಮತ್ ಸಹಿತ ಜನಪ್ರತಿನಿಧಿಗಳು ಸರಕಾರದ ಗಮನಸೆಳೆದಿದ್ದಾರೆ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ನಮ್ಮ ಹೋರಾಟಕ್ಕೆ ಧ್ವನಿಗೂಡಿಸಿದ್ದಾರೆ.
ವಕೀಲರ ಸಂಘದ ಮೂಲಕವೂ ಈಗಾಗಲೇ ವಿವಿಧ ಹಂತದ ಹೋರಾಟ ನಡೆಸಲಾಗಿದೆ.ಸಂಚಾರ ಹೈಕೋಟ್೯ ಪೀಠ ಸ್ಥಾಪನೆಗೆ ಈಗ ಪೂರಕ ವಾತಾವರಣವಿದ್ದು,ಮುಂದೆ ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟದಲ್ಲಿ ಇದನ್ನು ಘೋಷಿಸಬೇಕು ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ ಅವರು ಆಗ್ರಹಿಸಿದ್ದಾರೆ.
ಇಲ್ಲದಿದ್ದಲ್ಲಿ ಮುಂದಿನ ಹಂತದ ಹೋರಾಟವಾಗಿ ಹೆಜಮಾಡಿ ಟೋಲ್ ಗೇಟ್ ನಿಂದ ಮಂಗಳೂರಿನವರೆಗೆ ಬೃಹತ್ ಜಾಥ ನಡೆಸಲಾಗುವುದು ಎಂದು ಎಚ್ಚರಿಸಿದ ಅವರು ಮಂಗಳೂರಿನಲ್ಲಿ 4 ನೇ ಹೈಕೋಟ್೯ ಸಂಚಾರಿ ಪೀಠ ಸ್ಥಾಪನೆಯಾದರೆ ಜನಸಾಮಾನ್ಯರು ಸಹಿತನ್ಯಾಯ ಕೋರಿ ಬರುವಂತ ಸಂಘ ಸಂಸ್ಥೆಗಳಿಗೂ ತ್ವರಿತ ನ್ಯಾಯ ದೊರಕಲಿದೆ ಎಂದರು.
ದ.ಕ.,ಉಡುಪಿ,ಕೊಡಗು,ಉ.ಕ ಹಾಗೂ ಶಿವಮೊಗ್ಗ ಜಿಲ್ಲೆಯನ್ನು ಕೂಡ ಸೇರಿಸಲಾಗುವುದು, ದ.ಕ.ಜಿಲ್ಲೆಯಲ್ಲೇ ಆರು ಕಾನೂನು ಕಾಲೇಜ್ ಗಳಿವೆ, ಜಿಲ್ಲೆಯ ಖ್ಯಾತ ಹಿರಿಯ ವಕೀಲರು ಬೆಂಗಳೂರು ಹೈಕೋರ್ಟಿನಲ್ಲಿ ಕಾಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೂ ಇಲ್ಲಿಯೇ ಅಗಮಿಸಿ ತಮ್ಮ ಕಕ್ಷಿಗಾರರ ಪರ ವಾದಿಸಲು ಅವಕಾಶವಿದೆ ಇದರಿಂದ ಜನರಿಗೂ ಅನುಕೂಲವಾಗಲಿದೆ ಎಂದ ಅವರು ಮಂಗಳೂರಿನಲ್ಲಿ ಹೈಕೋಟ್೯ಸಂಚಾರಿ ಪೀಠ ಸ್ಥಾಪನೆಯಾಗುವುದರಿಂದ ಜಿಲ್ಲೆಯ ಅಭಿವೃದ್ಧಿಯ ಜತೆಗೆ ಪ್ರವಾಸೋದ್ಯಮ,ಉದ್ಯೋಗಾವಕಾಶಕ್ಕು ಅನುಕೂಲವಾಗಲಿದೆ ಎಂದು ಎಚ್.ವಿ. ರಾಘವೇಂದ್ರ ಅವರು ತಿಳಿಸಿದರು.
ವಕೀಲರ ಭವನ:
ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ವಕೀಲರ ಭವನವಿದ್ದು, ಮಂಗಳೂರು ಹಾಗೂ ಬಂಟ್ವಾಳದಲ್ಲಿ ಮಾತ್ರ ವಕೀಲರ ಭವನದ ನಿರ್ಮಾಣವಾಗಿಲ್ಲ,ಈ ನಿಟ್ಟಿನಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಅದೇ ರೀತಿ ಬಂಟ್ವಾಳದಲ್ಲಿ 29 ಲ.ರೂ.ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿದ ಕೋಟ್ ೯ ಸಂಕೀರ್ಣಕ್ಕೆ ಅನುದಾನ ಬಿಡುಗಡೆಯ ಹಂತದಲ್ಲಿದೆ ಎಂದು ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚಡ್೯ ಎಂ.ಕೋಸ್ತಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಜಯಪ್ರಕಾಶ್ ಭಂಡಾರಿ ಮೂಡಬಿದ್ರೆ, ನವೀನ್ ಬಿ.ಕೆ.,ಸುಕುಮಾರ್ ಕೊಡ್ತುಗುಳಿ ಸುಳ್ಯ,ವಸಂತ ಮರಕಡ ಬೆಳ್ತಂಗಡಿ,ಜಗನ್ನಾಥ ರೈ ಪುತ್ತೂರು,ಹರೀಶ್ ಪಿ.,ಮೂಡಬಿದ್ರೆ,ಜೆಸಿಂತಾ ಕ್ರಾಸ್ತಾ ,ರವೀಂದ್ರ ಕುಕ್ಕಾಜೆ ಮೊದಲಾದವರಿದ್ದರು.
