ಬಂಟ್ವಾಳ ವಕೀಲರ ಸಂಘದಿಂದ ‘ ಕೆಸರ್ ಡ್ ಒಂಜಿ ದಿನ’ ಕೆಸರಿನಲ್ಲಿಕುಣಿದು ಕುಪ್ಪಳಿಸಿದ ವಕೀಲರು
ಬಂಟ್ವಾಳ : ವಕೀಲರ ಸಂಘ (ರಿ), ಬಂಟ್ವಾಳ ಇದರ ಆಶ್ರಯದಲ್ಲಿ 6ನೇ ವರ್ಷದ ‘ ಕೆಸರ್ ಡ್ ಒಂಜಿ ದಿನ’ ಕಾರ್ಯಕ್ರಮ ಶನಿವಾರರಂದು ಬಿ. ಸಿ ರೋಡಿನ ಸ್ಪರ್ಶಾ ಕಲಾ ಮಂದಿರದ ‘ಪ್ರಥಮ್ ಬಂಗೇರ ಚಾವಡಿ’ ಯಲ್ಲಿ ನಡೆಯಿತು.

ಬಂಟ್ವಾಳ ಹಿರಿಯ ಸಿವಿಲ್ ಮತ್ತು ಜೆ. ಎಮ್. ಎಫ್. ಸಿ ನ್ಯಾಯಾಧೀಶರಾದ ಅನಿಲ್ ಪ್ರಕಾಶ್ ಎಮ್. ಪಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಪ್ರಧಾನ ಸಿವಿಲ್ ಮತ್ತು ಜೆ. ಎಮ್. ಎಫ್. ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕೃಷ್ಣಮೂರ್ತಿ ಎನ್, ಅವರು ಮಾತನಾಡಿ ಇತಿಹಾಸವನ್ನು ಎಂದೂ ಮರೆಯಬಾರದು,ನಾಡಿನ ಸಂಸ್ಕೃತಿಯನ್ನು ಕಾಪಾಡಿಕೊಂಡು ಮುನ್ನಡೆಯುವ ಜವಬ್ದಾರಿ ಮುಂದಿನ ಯುವಪೀಳಿಗೆಗಿದೆ. ತುಳುನಾಡಿನ ಪ್ರತಿಯೊಂದು ತಿಂಡಿ,ತಿನಸುಗಳಿಗೂ ವೈದ್ಯಕೀಯವಾದ ಸಂಬಂಧವಿದೆ ಎಂಬುದನ್ನು ನಾನು ದ.ಕ.ಜಿಲ್ಲೆಗೆ ಬಂದ ಬಳಿಕ ಚೆನ್ನಾಗಿ ಅರಿತುಕೊಂಡಿದ್ದೇನೆ ಎಂದು ಹೇಳಿದರು.
ವಕೀಲರ ಸಂಘ ಅಧ್ಯಕ್ಷರಾದ ರಿಚರ್ಡ್ ಎಂ. ಕೋಸ್ತ ಅಧ್ಯಕ್ಷತೆ ವಹಿಸಿದ್ದರು.ಬಂಟ್ವಾಳದ ಹೆಚ್ಚುವರಿ ಸಿವಿಲ್ ಮತ್ತು ಜೆ. ಎಮ್. ಎಫ್. ಸಿ.ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಂದ್ರ ಪ್ರಸಾದ್ ಕೆ. ಎಸ್ ಉಪಸ್ಥಿತರಿದ್ದರು.
ಶಿಕ್ಷಕಿ, ತುಳು ಬರಹಗಾರ್ತಿ ರೇಣುಕಾ ಕಾಣಿಯೂರು ಅವರು ತುಳುನಾಡಿನ ಪ್ರತಿಯೊಂದು ಆಚಾರ,ವಿಚಾರಗಳನ್ನು
ವೈಜ್ಞಾನಿಕ ನೆಲೆಯಲ್ಲಿ ನೋಡಿದಾಗ ಭವಿಷ್ಯದಲ್ಲಿಯು ಉಳಿಯಬಹುದು, ತುಳುನಾಡಿನ ಸಂಸ್ಕ್ರತಿಯ ಬಗ್ಗೆ ಮೂಲನಂಬಿಕೆ ಎಂಬ ವಿಶ್ವಾಸದ ಪ್ರತೀಕವಾಗಲಿ ಎಂದು ತಿಳಿಸಿದರು.
ಇದೇ ವೇಳೆ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾದ ವಿದ್ಯಾರ್ಥಿನಿ,ವಕೀಲ ಸದಾಶಿವ ನಾಯಕ್ ರವರ ಪುತ್ರಿ ವಿಘ್ನೇಶ್ವರಿ ನಾಯಕ್ ಅವರನ್ನು ಅಭಿನಂದಿಸಲಾಯಿತು. ತುಳುನಾಡಿನ ವಿವಿಧ ಬಗೆಯ ತಿಂಡಿ ತಿನಸುಗಳು ಖಾಧ್ಯಗಳನ್ನು ಸವಿದರು. ವಕೀಲರು ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿ ಕುಣಿದು,ಕುಪ್ಪಳಿಸಿದರು.
ಸಂಘದ ಕಾರ್ಯದರ್ಶಿ ನರೇಂದ್ರನಾಥ್ ಭಂಡಾರಿ ಸ್ವಾಗತಿಸಿದರು , ವಕೀಲರಾದ ಸುಂದರ ಬಾಚಕೆರೆ ವಂದಿಸಿದರು. ದೀಪಕ್ ಪೆರಾಜೆ ಹಾಗೂ ಅಭಿನಯ ಚಿದಾನಂದ ಕಾರ್ಯಕ್ರಮ ನಿರೂಪಿಸಿದರು.



