ಬಂಟ್ವಾಳ: ವಿದ್ಯಾರ್ಥಿಗಳು ಶಿಕ್ಷಣದಿಂದ ಕೌಶಲ್ಯವನ್ನು ಪಡೆಯುವುದರ ಜೊತೆಗೆ ಸಮಾಜದಲ್ಲಿ ಸಹಬಾಳ್ವೆ, ವಿನಯವಂತಿಕೆಯಿಂದ ಜೀವನ ನಡೆಸಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಪಿ. ಎಲ್. ಧರ್ಮ ಹೇಳಿದ್ದಾರೆ.ಬುಧವಾರ ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಅಜಾದ್ ಭವನದಲ್ಲಿ  ನಡೆದ ೨೦೨೫-೨೬ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳ  ಆಗತ-ಸ್ವಾಗತ ೨೦೨೫ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಭವಿಷ್ಯದಲ್ಲಿ  ವಿದ್ಯಾತರ್ರಿಗಳು ವಿದ್ಯಾಕೇಂದ್ರಕ್ಕೆ ಸ್ಥಿರವಾದ ಸ್ತಂಭದಂತೆ ಸಹಕಾರ ನೀಡಬೇಕೆಂದರು. 

ಅತಿಥಿಯಾಗಿದ್ದ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ   ಎಂ. ಎಲ್ .ಅಶ್ವಿನಿ ಮಾತನಾಡಿ,ವಿಕಸಿತ ಭಾರತಕ್ಕಾಗಿ ವಿದ್ಯಾರ್ಥಿಗಳ ಕೊಡುಗೆ ಅತ್ಯಧಿಕವಾಗಿದೆ ಎಂದು ಶುಭಹಾರೈಸಿದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಪ್ರಸಕ್ತ ದಿನಗಳಲ್ಲಿ ಸನಾತನ ಭಾರತೀಯ ಸಂಸ್ಕೃತಿ ಆಧಾರಿತವಾದ ಮಹರ್ಷಿ ಶಿಕ್ಷಣದ ಅಗತ್ಯತೆ ಮತ್ತು ಅನಿವಾರ್ಯತೆಯನ್ನು ಮನಗಂಡು ಈ ವಿದ್ಯಾಕೇಂದ್ರದಲ್ಲಿ ಇಂತಹ ಮಾನವೀಯ ಮೌಲ್ಯಗಳನ್ನೊಳಗೊಂಡ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು. 

ಆರಂಭದಲ್ಲಿ ಅತಿಥಿಗಳು ದೀಪ ಪ್ರಜ್ವಲನಗೈದರು. ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ, ಬಳಿಕ ಅತಿಥಿಗಳು ಅಗ್ನಿಹೋತ್ರಕ್ಕೆ ಹವಿಸ್ಸನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

 ನಂತರ ನೂತನ ವಿದ್ಯಾರ್ಥಿಗಳು ಅಗ್ನಿಹೋತ್ರಕ್ಕೆ ಹವಿಸ್ಸನ್ನು ಅರ್ಪಿಸುವ ಮೂಲಕ ಪದವಿ ಶಿಕ್ಷಣಕ್ಕೆ ಮುಂದಡಿಯಿಟ್ಟರು. ಹೊಸ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಆರತಿ ಬೆಳಗಿ, ಕುಂಕುಮ ಹಚ್ಚಿ ಸ್ವಾಗತಿಸಲಾಯಿತು, ಬಳಿಕ ವಿದ್ಯಾರ್ಥಿಗಳು ಹಿರಿಯರ ಆಶೀರ್ವಾದ ಪಡೆದರು. 

ಪುತ್ತೂರು ಜಿಎಲ್ ಆಚಾರ್ಯ ಜುವೆಲ್ಲರ್ಸ್ ಸಂಸ್ಥೆಯ ಅಧ್ಯಕ್ಷ  ಬಲರಾಮ ಆಚಾರ್ಯ ಹಾಗೂ ಪತ್ನಿ  ರಾಜಿ ಬಲರಾಮ ಆಚಾರ್ಯ, ಕೆದಿಲ ಹಾರ್ದಿಕ್ ಹರ್ಬಲ್ಸ್ ನ ಸಿಇಒ  ಮುರಳೀಧರ ಹಾಗೂ ಇದರ ಮಾಲಕಿ ಮೀರಾ ಮುರಳಿ ಇವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಶುಭ ಹಾರೈಸಿದರು. 

 ರಾಷ್ಟ್ರ ಸೇವಿಕಾ ಸಮಿತಿಯ ದಕ್ಷಿಣ ಪ್ರಾಂತದ ಮಾರ್ಗದರ್ಶಕ ಮಂಡಳಿಯ ಸದಸ್ಯೆ ಡಾ| ಕಮಲಾ ಪ್ರಭಾಕರ ಭಟ್, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ವೇದಿಕೆಯಲ್ಲಿದ್ದರು. 

ಈ ಸಂದರ್ಭದಲ್ಲಿ ಕಾಲೇಜಿನ ಮಾಹಿತಿ ಕೈಪಿಡಿ “ಶಿಕ್ಷಣ ದರ್ಶಿನಿ”ಯನ್ನು  ಬಿಡುಗಡೆಗೊಳಿಸಲಾಯಿತು.

ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಸ್ವಾಗತಿಸಿದರು. ವಿದ್ಯಾರ್ಥಿನಿಗಳಾದ ಕು. ಧನುಶ್ರೀ ವಂದಿಸಿದರು,ಕು. ದಿವ್ಯ ಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *