ಬಂಟ್ವಾಳ: ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಇತ್ಯರ್ಥ ವಾಗುವಂತಹ ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾಲತ್ ಮೂಲಕ ಇತ್ಯರ್ಥಗೊಳಿಸಲು ನಿರ್ದೇಶಿಸಿರುವ ಹಿನ್ನಲೆಯಲ್ಲಿ ಬಂಟ್ವಾಳ ನ್ಯಾಯಾಲಯದಲ್ಲು ಸೆ.13 ರಂದು ಲೋಕ ಅದಾಲತ್ ನಡೆಯಲಿದೆ ಎಂದು ಬಂಟ್ವಾಳ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಂದ್ರ ಪ್ರಸಾದ್ ಕೆ.ಎಸ್ ಅವರು ತಿಳಿಸಿದ್ದಾರೆ.

ಅದಾಲತ್ ಪ್ರಯುಕ್ತವಾಗಿ ಸೋಮವಾರ ಸಂಜೆ ಬಂಟ್ವಾಳ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.
ವಿಚಾರಣಾ ಹಂತದಲ್ಲಿರುವ ರಾಜಿಯಾಗಬಹುದಾದಂತ ಕ್ರಿಮಿನಲ್ ಪ್ರಕರಣಗಳು, ಎಂಎಂಆರ್‌ಡಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು,ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ಆಸ್ತಿ ವಿವಾದಗಳು, ಹಣ ವಸೂಲಿ ಪ್ರಕರಣಗಳು, ನಿರ್ಧಿಷ್ಟ ಪರಿಹಾರ ಕಾಯ್ದೆಯಡಿಯಲ್ಲಿ ದಾಖಲಾದ ಮೊಕದ್ದಮೆಗಳು, ಮೋಟಾರು ವಾಹನ, ಎಂಎಂಆರ್‌ಡಿ, ಬ್ಯಾಂಕ್ ವಸೂಲಾತಿ, ವಿವಾಹ ಸಮನ್ವಯ, ಚೆಕ್ ಬೌನ್ಸ್ ಪ್ರಕರಣಗಳು ಮತ್ತು ಇತರ ರಾಜಿಯೋಗ್ಯ ಪ್ರಕರಣಗಳು ಸೇರಿದಂತೆ ಸಿವಿಲ್ ಮತ್ತು ಕ್ರಿಮಿನಲ್ ವಿವಾದಗಳನ್ನು ಪರಿಹರಿಸಿಕೊಳ್ಳಲು ಈ ಅದಾಲತ್ ನಲ್ಲಿ ಅವಕಾಶವಿದೆ ಎಂದರು.
ಈ ಸಂದರ್ಭದಲ್ಲಿ ಬಂಟ್ವಾಳ ಹಿರಿಯ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅನಿಲ್ ಪ್ರಕಾಶ್,
ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕೃಷ್ಣ ಮೂರ್ತಿ. ಎನ್ ,ಸಹಾಯಕ ಸರಕಾರಿ ಅಭಿಯೋಜಕರಾದ ಸರಸ್ವತಿ ಅವರು ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು.
ವಿವಿಧ ಇಲಾಖಾಧಿಕಾರಿಗಳು, ವಿವಿಧ ಪೊಲೀಸ್ ಠಾಣೆಯ ಅಧಿಕಾರಿಗಳು,ಬ್ಯಾಂಜ್ ಪ್ರತಿನಿಧಿಗಳು
ಮೊದಲಾದವರಿದ್ದರು.
