ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಸರಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಹೊರಗುಳಿದ ಫಲಾನುಭವಿಗಳನ್ನು ಯೋಜನಾ ವ್ಯಾಪ್ತಿಗೆ ತರಲಾಗಿದೆ. ಪ್ರಸ್ತುತ ಶಕ್ತಿ ಯೋಜನೆಯ ಪ್ರಯಾಣಿಕರ ಸಂಖ್ಯೆ ೫೦೦ ಕೋಟಿ ದಾಟಿದೆ ಎಂದು ದ.ಕ.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದರು.

ಭಾನುವಾರ ಬಿ.ಸಿ.ರೋಡಿನ ಅಂಬೇಡ್ಕರ್ ಭವನದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ವತಿಯಿಂದ ,ತಾಲೂಕು ಪಂಚಾಯತ್ ಬಂಟ್ವಾಳ, ರೋಟರಿ ಕ್ಲಬ್ ಬಿ.ಸಿ.ರೋಡು ಸಿಟಿ, ಯನಪೋಯ ಹಾಗೂ ದೇರಳಕಟ್ಟೆ ಅಸ್ಪತ್ರೆಗಳ ಸಹಯೋಗದೊಂದಿಗೆ ನಡೆದ ಉಚಿತ ದಂತ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲೂಕು ಅಧ್ಯಕ್ಷೆ ಜಯಂತಿ ಪೂಜಾರಿ ಮಾತನಾಡಿ, ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿ ಜನ ಸಾಮಾನ್ಯರಿಗೆ ಯೋಜನೆಯನ್ನು ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಅತಿಥಿಯಾಗಿದ್ದ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವ ಘಟನೆಗಳು ಹೆಚ್ಚುತ್ತಿದ್ದು,ಈ ನಿಟ್ಟಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು, ಇಂತಹ ಆರೋಗ್ಯ ಶಿಬಿರಗಳಲ್ಲಿ ಭಾಗಿಯಾಗಬೇಕು ಎಂದರು.
ಮಾಜಿ ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ಬೂಡ ಮಾಜಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ರೋಟರಿ ಅಧ್ಯಕ್ಷರುಗಳಾದ ಪದ್ಮನಾಭ ರೈ, ರೋ.ದಿವಾಕರ ಶೆಟ್ಟಿ ರೋಟರಿ ಸ್ಥಾಪಕ ಅಧ್ಯಕ್ಷ ರೋ. ಸತೀಶ್ , ಡಾ ವಿನಯ್ , ಡಾ. ಭೂಷಣ್, ಡಾ.ಮನೋಹರ ರೈ ಉಪಸ್ಥಿತರಿದ್ದರು.
ತಾ.ಪಂ.ಇ.ಒ.ಸಚಿನ್ ಸ್ವಾಗತಿಸಿ,ವಂದಿಸಿದರು. ಸಂಶುದ್ದೀನ್ ಕಾರ್ಯಕ್ರಮ ನಿರೂಪಿಸಿದರು.
