Published On: Sun, Jun 29th, 2025

ಕಾರ್ಮಿಕನೀತಿ ವಿರೋಧಿಸಿ ಜು.9 ರಂದು ಕಾರ್ಮಿಕ ಸಂಘಟನೆಯಿಂದ ಮುಷ್ಕರ

ಬಂಟ್ವಾಳ :  ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳಿಂದ ಜು.9 ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದು ಈ ಮುಷ್ಕರ ವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎ.ಐ.ಸಿ.ಸಿ.ಟಿ.ಯು ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಕಾರ್ಮಿಕರ ಸಮಾವೇಶವು ಭಾನುವಾರ ಬಿ.ಸಿ.ರೋಡ್ ನ ಡಾ. ಬಿ.ಆರ್ .ಅಂಬೇಡ್ಕರ್ ಭವನದಲ್ಲಿ ನಡೆಯಿತು.


ಸಮಾವೇಶವನ್ನು ಉದ್ದೇಶಿಸಿ ಎ.ಐ.ಸಿ.ಸಿ.ಟಿ.ಯು ರಾಜ್ಯಾಧ್ಯಕ್ಷರಾದ ಕಾ. ಪಿ.ಪಿ ಅಪ್ಪಣ್ಣ ಮಾತನಾಡಿ ಕೇಂದ್ರ ಸರಕಾರದ 11 ವರ್ಷಗಳ ಆಡಳಿತದಲ್ಲಿ ದುಡಿಯುವ ಜನರ ಸಂಕಷ್ಟಗಳು ಮಿತಿಮೀರಿದೆ. ದುಡಿಯುವ ಜನತೆಗೆ ಕನಿಷ್ಠ ಕೂಲಿ ಕೂಡಾ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಪೋರೇಟ್ ಧಣಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ  ಸರಕಾರ ಕಾರ್ಮಿಕರ ಎಂಟು ಗಂಟೆಗಳ ಕೆಲಸದ ಹಕ್ಕನ್ನು ಕಿತ್ತುಹಾಕಿ ವಾರದಲ್ಲಿ ಎಪ್ಪತ್ತು ಗಂಟೆ ದುಡಿಯುವಂತೆ ಕಾಯ್ದೆಯ ಮೂಲಕ ತಿದ್ದುಪಡಿ ತಂದು ಕಾರ್ಮಿಕರ ಮೇಲೆ ದಾಳಿ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
ಕಾರ್ಮಿಕ ಸಂಘಟನೆಗಳ ನಿರಂತರ ಹೋರಾಟದಿಂದ ಜಾರಿಯಾದ ಕಾರ್ಮಿಕ ಕಾನೂನುಗಳನ್ನು ತೆಗೆದು ಹಾಕಿ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದ್ದು ಈ ಸಂಹಿತೆಗಳು ಜಾರಿ ಆದರೆ ಕಾರ್ಮಿಕರು ಕಾರ್ಪೊರೇಟ್ ವರ್ಗದ ಗುಲಾಮರಾಗಬೇಕಾಗುತ್ತದೆ ಹಾಗೂ ಕಾರ್ಮಿಕರ ಎಲ್ಲಾ ಹಕ್ಕುಗಳು ಕಸಿಯಲ್ಪಡುತ್ತದೆ. ಈ ನಿಟ್ಟಿನಲ್ಲಿ ಜುಲೈ 9 ರಂದು ನಡೆಯುವ ಕಾರ್ಮಿಕರ ಅಖಿಲ ಭಾರತ ಮುಷ್ಕರದಲ್ಲಿ ಎಲ್ಲಾ ಕಾರ್ಮಿಕರು ಪಾಲ್ಗೊಂಡು ಮುಷ್ಕರ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು .
ಎ.ಐ.ಸಿ.ಸಿ.ಟಿ.ಯು ಜಿಲ್ಲಾ ಅಧ್ಯಕ್ಷರಾದ ಕಾ.ರಾಮಣ್ಣ ವಿಟ್ಲ ಮಾತನಾಡಿ ಕಾರ್ಮಿಕ ವರ್ಗ ಸಂಘಟಿತರಾಗುವ ಮೂಲಕ ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಬೇಕೆಂದು ಕರೆ ನೀಡಿದರು.
ಎ.ಐ.ಸಿ.ಸಿ.ಯು‌ ಜಿಲ್ಲಾ ಕಾರ್ಯದರ್ಶಿ ಕಾ.ಮೋಹನ್ ಕೆ.ಇ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಕ್ಷರ ದಾಸೋಹ ನೌಕರರ ಸಂಘದ ಮುಖಂಡರಾದ ಕಾ.ವಿನಯ ನಡುಮೊಗರು, ಅಖಿಲ ಭಾರತ ಕಿಸಾನ್ ಮಹಾಸಭಾದ ಮುಖಂಡರಾದ ಕಾ.ಮಹಮ್ಮದ್ ಇಕ್ಬಾಲ್ ಹಳೆಮನೆ,ಕಾ. ಮಹಾವೀರ್ ಜೈನ್ ಪುತ್ತೂರು, ಕಾ.ಸಂಜೀವ ಬೆಳ್ತಂಗಡಿ.ಸುಲೈಮಾನ್ ಕೆಳಿಂಜ, ಎ.ಐ.ಸಿ.ಸಿ.ಟಿ.ಯು ಜಿಲ್ಲಾ ಮುಖಂಡರಾದ ಕಾ.ಭರತ್ ಕುಮಾರ್, ಕಾ .ಸತೀಶ್ ಕುಮಾರ್ ,ಕಟ್ಟಡ ಕಾರ್ಮಿಕರ ಸಂಘದ ಆನಂದ ಶೆಟ್ಟಿಗಾರ್, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಮುಖಂಡರಾದ ಸುಧಾ ರಾವ್ ಬೆಳ್ತಂಗಡಿ ಮುಂತಾದವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter