ಬಂಟ್ವಾಳ: ಚಿಣ್ಣರಲೋಕ ಸೇವಾ ಬಂಧು (ರಿ), ಬಂಟ್ವಾಳ ಹಾಗೂ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ.)ಇದರ ಆಶಯದಲ್ಲಿ” ಶೈಕ್ಷಣಿಕ ಸಂಭ್ರಮ-2025″ ಕಾರ್ಯಕ್ರಮವು ಜೂ.22 ರಂದು ಸಂಜೆ 4.30 ಕ್ಕೆ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಚಿಣ್ಣರಲೋಕ ಸೇವಾ ಬಂಧು ಅಧ್ಯಕ್ಷ ಮೋಹನದಾಸ ಕೊಟ್ಟಾರಿ ಮುನ್ನೂರು ತಿಳಿಸಿದ್ದಾರೆ.

ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು,ಬಂಟ್ಚಾಳ ತಾ. ಬಿಲ್ಲವ ಸಮಾಜ ಸೇವಾ ಸಂಘದ ಅದ್ಯಕ್ಷ ಸಂಜೀವ ಪೂಜಾರಿ ಸಭಾಧ್ಯಕ್ಷತೆ ವಹಿಸಲಿದ್ದು,ಹಲವಾರು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು
ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ನಾಲ್ವರು ವಿದ್ಯಾರ್ಥಿಗಳಾದ ಪ್ರಾರ್ಥನಾ,ಅಝ್ಮಾ ಖತೀಜಾ ಕುನ್ನಿಲ್,ತನ್ವಿ,ಶ್ರೀಶೈಲ ಅವರಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಗುವುದು, ಸಂಸ್ಥೆ ದತ್ತು ಸ್ವೀಕರಿಸಿರುವ ಬೋಳಂತೂರು ದ.ಕ.ಜಿ.ಪಂ.ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ 70 ಮಂದಿ ವಿದ್ಯಾರ್ಥಿಗಳಿಗೆ ಸುಮಾರು 62 ಸಾ.ರೂ.ವೆಚ್ಚದಲ್ಲಿ ಬರೆಯುವ ಪುಸ್ತಕಗಳನ್ನು ವಿತರಿಸಲಾಗುವುದು ಹಾಗೆಯೇ ಅಗತ್ಯವಿರುವ ಇತರ ಶಾಲೆಯ ಮಕ್ಕಳಿಗೂ ಬರೆಯುವ ಪುಸ್ತಕ ವಿತರಿಸಲು ನಿರ್ಧರಿಸಲಾಗಿದೆ.ಹಾಗೆಯೇ ಬಡವಿದ್ಯಾರ್ಥಿಗಳಿಗೆ ಸಹಾಯಧನವನ್ನು ವಿತರಿಸಲಾಗುವುದು ಎಂದರು.
ನಾಲ್ಕು ವರ್ಷದೆ ಹಿಂದೆ ದತ್ತು ಸ್ವೀಕರಿಸಿದ ಬಳಿಕ ಬೋಳಂತೂರು ಶಾಲೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು,4 ಮಂದಿ ಶಿಕ್ಷಕರನ್ನು ನಿಯೋಜಿಸಲಾಗಿದೆ.ಮಕ್ಕಳಿಗೆ ಸಂಸ್ಥೆಯ ವತಿಯಿಂದ ಒಂದು ಜೊತೆ ಸಮವಸ್ತ್ರವನ್ನು ವಿತರಿಸಲಾಗುತ್ತಿದೆ.ಇದೀಗ ಶಾಲೆಯಲ್ಲಿ ಮಕ್ಕಳ ಸಂಖ್ಯೆಯು ಹೆಚ್ಚಾಗಿದೆ ಎಂದು ಮೋಹನ್ ದಾಸ್ ಕೊಟ್ಟಾರಿ ವಿವರಿಸಿದರು.
ಸಭಾಕಾರ್ಯಕ್ರಮದ ಮೊದಲು ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಸಿಂಚನ ಸಾಂಸ್ಕೃತಿಕ ಕಾರ್ಯಕ್ರಮ,ಬಳಿಕ “ತೆಲಿಪುವರಾ ಅತ್ ಬುಲಿಪುವರಾ” ತುಳು ನಾಟಕ ಪ್ರದರ್ಶನವು ನಡೆಯಲಿದೆ ಎಂದರು.
ಚಿಣ್ಣರಲೋಕ ಸಂಸ್ಥೆ ಮಕ್ಕಳ ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿ ಕಾರ್ಯಾಚರಿಸುತ್ತಿದ್ದು,ಮೋಕೆದ ಕಲಾವಿದೆರ್ ನಾಮಾಂಕಿತದಲ್ಲಿ ಹಿರಿಯ,ಕಿರಿಯ ಕಲಾವಿದರನ್ನು ಸೇರಿಸಿಕೊಂಡು ನಿರಂತರವಾಗಿ ವಿವಿಧ ಸಾಮಾಜಿಕ,ಸಾಂಸ್ಕೃತಿಕ ಚಟುವಟಿಕೆ ನಡೆಸುತ್ತಾ ಬರುತ್ತಿದೆ.
ಕರಾವಳಿ ಕಲೋತ್ಸವವನ್ನು ಆಯೋಜಿಸುವ ಮೂಲಕ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ವೇದಿಕೆಯನ್ನು ಒದಗಿಸಿಕೊಡುತ್ತಿದೆ ಎಂದು ಸಂಸ್ಥೆಯ ಆಡಳಿತ ಟ್ರಸ್ಟಿ ತೇವು ತಾರನಾಥ ಕೊಟ್ಟಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ರಾಮಕೃಷ್ಣ ರಾವ್,ಇಬ್ರಾಹಿಂ ಕೈಲಾರ್,ಶೋಭಾ ಶೆಟ್ಟಿ ಉಪಸ್ಥಿತರಿದ್ದರು.
