ಬಂಟ್ವಾಳ:ಸಮಾಜದಲ್ಲಿ ಬಡಜನರ ಸೇವೆ ದೇವರ ಆರಾಧನೆಗೆ ಸಮಾನವಾಗಿದ್ದು, ಬಡ ಕುಟುಂಬಕ್ಕೆ ದಾನಿಗಳ ನೆರವಿನಲ್ಲಿ ಹೊಸ ಮನೆ ನಿರ್ಮಿಸಿ ಕೊಟ್ಟಿರುವ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಅವರ ಪರಿಶ್ರಮ ಇತರರಿಗೆ ಮಾದರಿಯಾಗಿದೆ ಎಂದು ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಇಲ್ಲಿನ ಪಂಜಿಕಲ್ಲು ಗ್ರಾಮದ ಕುಂಜರಬೆಟ್ಟು ಎಂಬಲ್ಲಿ ತೀರಾ ಬಡಕುಟುಂಬದ ಸೋಮಶೇಖರ -ಸುಶೀಲ ದಂಪತಿಗೆ ಗುರುವಾರ ನೂತನ ಮನೆ ಕೀಲಿ ಹಸ್ತಾಂತರಿಸಿ ಅವರು ಆಶೀರ್ವಚನ ನೀಡಿದರು. ಇದೇ ವೇಳೆ ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಸ್ವಾಮೀಜಿ ಗೌರವಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇ ಶಕದಿನೇಶ್, ಯೋಜನಾಧಿಕಾರಿ ಪಿ.ಜಯಾನಂದ, ಮೇಲ್ವಿಚಾರಕ ಬಾಬು, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ, ಕೋಶಾಧಿಕಾರಿ ದೇವಪ್ಪ ಪೂಜಾರಿ, ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ, ಪಂಜಿಕಲ್ಲು ಗ್ರಾ.ಪಂ. ಪಂಚಾಯತಿ ಅಧ್ಯಕ್ಷೆ ನಳಿನಿ ಪ್ರಸಾದ್ ಗಾಣಿಗ, ಮೆಸ್ಕಾಂ ಕಿರಿಯ ಎಂಜಿನಿಯರ್ ತಿಲಕ್ ಮತ್ತಿತರರು ಶುಭ ಹಾರೈಸಿದರು.
ಉದ್ಯಮಿ ನವೀನ್ ಗಾಣಿಗ ಮಾಣಿಮಜಲು, ನವೀನ್ ಕುಂಜರಬೆಟ್ಟು, ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಮೋಹನ್ ಅಣ್ಣಳಿಕೆ, ಸಿರಿಲ್ ಕಾರ್ಲೋ ಮತ್ತಿತರರು ಇದ್ದರು. ಸಂಘಟಕ ದೇವಪ್ಪ ಕುಲಾಲ್ ಪಂಜಿಕಲ್ಲು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಮೋಹನ್ ಕೆ. ಶ್ರೀಯಾನ್ ರಾಯಿ ವಂದಿಸಿದರು.