ನೃತ್ಯಕಲೆ ಭಗವಂತನನ್ನು ಸಾಕ್ಷತ್ಕರಿಸುವ ಸಾಧನ :ಕವಿತಾ ದೇವದಾಸ್
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ನಡೆಯುತ್ತಿರುವ ಭರತನಾಟ್ಯ ತರಗತಿಯ ವಾರ್ಷಿಕ ಸಂಭ್ರಮ ಭಾನುವಾರ ಸಂಜೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು.

ತುಂಬೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಕವಿತಾ ದೇವದಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರಾಚೀನ ನೃತ್ಯ ಕಲೆಯಾದ ಭರತನಾಟ್ಯದ ಹುಟ್ಟು ಹಾಗೂ ದೇವಸ್ಥಾನದ ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ. ಭಾವ, ರಾಗ, ತಾಳದ ಸಮ್ಮಿಲನ ಭರತನಾಟ್ಯ. ಇದು ಕೇವಲ ನೃತ್ಯಕಲೆಯಲ್ಲದೆ ಭಗವಂತನನ್ನು ಸಾಕ್ಷತ್ಕರಿಸುವ ಸಾಧನವಾಗಿದೆ. ಮನೋರಂಜನೆಯ ಜೊತೆಗೆ ಸಂಸ್ಕಾರವನ್ನು ನೀಡುತ್ತದೆ, ಇದರಲ್ಲಿರುವ ಮುದ್ರೆಗಳಿಗೆ ವಿಶಿಷ್ಠವಾದ ಅರ್ಥವಿದೆ ಎಂದು ತಿಳಿಸಿದರು.
ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ತೇವು ತಾರಾನಾಥ ಕೊಟ್ಟಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಇಂದು ಗುರು ಪರಂಪರೆ ಉಳಿದಿರುವುದು ಕಲಾಕ್ಷೇತ್ರದಲ್ಲಿ ಮಾತ್ರ. ಕಲೆಗಳು ಆರಾಧನ ಪದ್ದತಿಯಲ್ಲಿದ್ದು ಭರತನಾಟ್ಯದಂತಹ ಕಲೆಯಿಂದ ಸಂಸ್ಕೃತಿ ಉಳಿಯಲು ಸಾಧ್ಯವಿದೆ. ಇದರಿಂದ ಶಾರದೆಯ ಅನುಗ್ರಹವಾಗುವುದರ ಜೊತೆಗೆ ಅಂತಃ ಸತ್ವ ಮಕ್ಕಳಲ್ಲಿ ಜಾಗೃತವಾಗುತ್ತದೆ ಎಂದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಮಾತನಾಡಿ ಕಳೆದ 25 ವರ್ಷಗಳಿಂದ ಸೇವಾಂಜಲಿ ಸಂಸ್ಥೆಯ ಮೂಲಕ ಭರತನಾಟ್ಯ, ಭಜನೆ, ಡ್ರಾಯಿಂಗ್ ಮೊದಲಾದ ತರಬೇತಿಗಳನ್ನು ಮಕ್ಕಳಿಗೆ ನೀಡುತ್ತಾ ಬರಲಾಗುತ್ತಿದೆ ಎಂದರು.
ನೃತ್ಯ ಗುರು ಮಂಜುಳ ಸುಬ್ರಹ್ಮಣ್ಯಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿದ್ಯಾಶಿವರಾಜ್ ಸುಜೀರು ಕಾರ್ಯಕ್ರಮ ನಿರೂಪಿಸಿದರು.