ಐದುದಿನಗಳ ಪುರಲ್ದ ಚೆಂಡು ಉತ್ಸವಕ್ಕೆ ಚಾಲನೆ
ಬಂಟ್ವಾಳ: ಪ್ರಸ್ತುತ ವರ್ಷ ಸುದೀರ್ಘ 28 ದಿನಗಳ ಕಾಲದ ಜಾತ್ರಾ ಸಂಭ್ರಮದಲ್ಲಿರುವ ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ “ಪುರಲ್ಲ ಚೆಂಡು ಖ್ಯಾತಿಯ ಮೊದಲ ದಿನ (ಕೊಡಿ ಚೆಂಡು)ದ ಚೆಂಡಿನ ಉತ್ಸವ ಶನಿವಾರ ಸಂಜೆ ನಡೆಯಿತು.

ಒಟ್ಟು ಐದು ದಿನಗಳ ಕಾಲ ಪೊಳಲಿಯಲ್ಲಿ ಚೆಂಡಿನ ಉತ್ಸವ ನಡೆಯಲಿದೆ.ಮೊದಲದಿನದ
ಕೊಡಿ ಚೆಂಡಿನ ಬಳಿಕ ಕುಮಾರ ರಥ ನಡೆಯುತ್ತದೆ.ಏ. 6 ರಂದು ಎರಡನೇ ದಿನದ ಚೆಂಡು, ಹೂವಿನ ತೇರು, ಏ. 7ರಂದು ಮೂರನೇ ದಿನದ ಚೆಂಡು, ಸೂರ್ಯಮಂಡಲ, ಏ. 8 ರಂದು ನಾಲ್ಕನೇದಿನದ ಚೆಂಡು, ಚಂದ್ರಮಂಡಲ, ಏ. 9ರಂದು ಐದನೇ ದಿನದ ಕಡೇ ಚೆಂಡು, ಬೆಳ್ಳಿರಥ, ಆಳುಪಲ್ಲಕಿ ರಥ ನಡೆಯುವುದು ಸಂಪ್ರದಾಯವಾಗಿದೆ.
ಏ. 10ರಂದು ಮಹಾರಥೋತ್ಸವ, ಏ. 11ರಂದು ಆರಾಡ, ಅವಭೃತ ಸ್ನಾನ, ಮಗ್ರಂತ್ತಾಯ ನೇಮ, ಏ. 12ರಂದು ಪ್ರಧಾನ ದೈವ ಶ್ರೀ ಕೊಡಮಣಿತ್ತಾಯ ನೇಮ ನಡೆಯಲಿದೆ.
ಆರಂಭದಲ್ಲಿ ದೇವಿಯಲ್ಲಿ ಪ್ರಾರ್ಥನೆಗೈದ ಬಳಿಕ ಚೆಂಡನ್ನು ವಾದ್ಯಗೋಷ್ಠಿಯಲ್ಲಿ ಮೆರವಣಿಗೆ ಮೂಲಕ ಗದ್ದೆಗೆ ತಂದು ಸಾಂಪ್ರದಾಯಿಕ ಮಾತುಗಳ ಮೂಲಕ ಚೆಂಡು ಹಿಡಿದಿದ್ದ ಗಾಣಿಗ ಮನೆತನದವರು ಚೆಂಡನ್ನು ಪರ್ದ ಖಂಡದ ಮನೆತನದವರಿಗೆ ಕೊಟ್ಟು, ಚೆಂಡನ್ನು ಹಾರಿಸಲಾಗುತ್ತದೆ.ಬಳಿಕ ಮಕ್ಕಳು ಚೆಂಡಿನಲ್ಲಿ ಆಟವಾಡಿ ಸಂಭ್ರಮಿಸುತ್ತಾರೆ.
ಮೊದಲ ದಿನ ಚೆಂಡಿನ ಉತ್ಸವದಲ್ಲಿ ದೇವಳದ ತಂತ್ರಿಗಳು, ಅರ್ಚಕರು, ಆಡಳಿತ ಮೊಕೇಸರರಾದ
ಡಾ.ಮಂಜಯ್ಯ ಶೆಟ್ಟಿ,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಕೃಷ್ಣಕುಮಾರ್ ಪೂಂಜಾ ಫರಂಗಿಪೇಟೆ ಸಹಿತ ಹಲವಾರು ಗಣ್ಯರು,ಸ್ಥಳೀಯ ಪ್ರಮುಖರು ಹಾಜರಿದ್ದರು.