Published On: Sat, Mar 29th, 2025

ಬಂಟ್ವಾಳದಲ್ಲಿ ನೇತ್ರಾವತಿ ಕೊಳಚೆಯಿಂದ ಮಲೀನಗೊಂಡನೀರು ,ಮಂಗಳೂರಿನ ಜನರು ಇದೇ ನೀರನ್ನು ಬಳಕೆ ಮಾಡುತ್ತಾರಾ?

ಬಂಟ್ವಾಳ: ಅಯ್ಯೋ ವಿಧಿಯೇ ಮಂಗಳೂರು  ನಗರ ಸ್ಮಾಟ್೯ ಸಿಟಿಯೆಂಬ ಹೆಗ್ಗಳಿಕೆಯಲ್ಲಿ ಬೀಗುತ್ತಿದ್ದರೆ,ಈ‌ ಸಿಟಿಯ ಜನರು ಕುಡಿಯುವ ನೀರು ಮಾತ್ರ ಬಂಟ್ವಾಳದಲ್ಲಿ ಹರಿಯುವ ನೇತ್ರಾವತಿ ನದಿಯ ಒಡಲು ಸೇರುವ ಕೊಳಚೆ ನೀರನ್ನು ಎಂಬುದು ದುರಾದೃಷ್ಟಕರ ಸಂಗತಿ‌ ಎನ್ನದೇ ವಿಧಿಯಿಲ್ಲ!
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಎಂಬ ವ್ಯವಸ್ಥೆಯೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗದೇ ಇರುವ ಹಿನ್ನಲೆಯಲ್ಲಿ ಪುರಸಭಾ ವ್ಯಾಪ್ತಿಯ ಸುಮಾರು 12 ಕಡೆಗಳಲ್ಲಿ ಕಣ್ಣಿಗೆ ರಾಚುವಂತೆ ಕೊಳಕು ನೀರು ನೇರವಾಗಿ ಜಿಲ್ಲೆಯ ಜೀವನದಿ‌ ನೇತ್ರಾವತಿಯ ಒಡಲಿಗೆ ಸೇರುತ್ತಿದೆ.


ಇಂತಹ ಗಂಭೀರ ವಿಚಾರ ಬಂಟ್ವಾಳ ಪುರಸಭೆ,ಜಿಲ್ಲಾಡಳಿತ,ಮಂಗಳೂರು ಮಹಾನಗರಪಾಲಿಕೆಯಲ್ಲಿ ಅಸೀನರಾಗಿರುವ ಗೌರವಾನ್ವಿತ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೋ ಅಥವಾ ಬಂದಿದ್ದರೂ ನಿರ್ಲಕ್ಷ್ಯ ಮನೋಭಾವ ತಾಳಿದ್ದಾರೋ ಗೊತ್ತಿಲ್ಲ,ವಿಚಿತ್ರವೆಂದರೆ ಮಂಗಳೂರು ಸ್ಮಾಟ್೯ ಸಿಟಿಯಲ್ಲೇ ಕುಳಿತಿರುವ ಜಿಲ್ಲಾಧಿಕಾರಿ ಸಹಿತ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ತಾವು ಕೂಡ ಇದೇ ಕೊಳಚೆ ನೀರು ಕುಡಿಯುತ್ತಿದ್ದೆವೆ ಎಂಬ ಪರಿಜ್ಞಾನವು  ಇಲ್ಲದಾಯಿತೆ ಎಂಬುದು ಅನುಮಾನ ಮೂಡಿಸುತ್ತಿದೆ.


ಬಂಟ್ವಾಳದಿಂದ ಹರಿಯುವ ನೇತ್ರಾವತಿ ನದಿ ನೀರು ತುಂಬೆಯಲ್ಲಿ ಫೀಲ್ಟರ್ ಆಗಿ ಶುದ್ದೀಕರಣಗೊಳಿಸಿ ಬಳಿಕ ಪೂರೈಕೆ ಮಾಡಲಾಗುತ್ತಿದೆ ಅದನ್ನೇ ನಾವು ಸಹಿತ ಜನಸಾಮಾನ್ಯರು ಕುಡಿಯಲು ಬಳಸುತ್ತೆವೆ ಎಂದು ಅಂದುಕೊಂಡಿರುವುದು ಸಹಜ,ಆದರೆ ಬಂಟ್ವಾಳದ ವಿವಿದೆಡೆಯಲ್ಲಿ ನೇರವಾಗಿ ನೇತ್ರಾವತಿ ನದಿ ಸೇರುವ ದೃಶ್ಯವನ್ನು ಜಿಲ್ಲಾಧಿಕಾರಿ ಸಹಿತ ಪಾಲಿಕೆ ಆಯುಕ್ತರು ಪುರುಸೊತ್ತು ಮಾಡಿಕೊಂಡು ಕಣ್ಣಾರೆ ಕಂಡು ಒಮ್ಮೆ ಪರಾಂಬರಿಸಿ ನೋಡಿದರೆ ಒಳಿತು ಎನ್ನುವ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ.
ಎಲ್ಲೆಲ್ಲಿ ಕೊಳಚೆ ನೀರು ನದಿ ಸೇರುತ್ತದೆ:-
ಬಂಟ್ವಾಳ ತಾಲೂಕಿನ ಹೃದಯ ಭಾಗ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ‌ ಅತೀ ಹೆಚ್ಚು ಕಡೆಗಳಲ್ಲಿ ಮಲೀನ ನೀರು,ಕೊಳೆತ ತ್ಯಾಜ್ಯವಸ್ತುಗಳು ನೇತ್ರಾವತಿ ತನ್ನ ಒಡಲಿಗೆ ಅನಿವಾರ್ಯವಾಗಿ ಸೇರಿಸಿಕೊಂಡು ಮಲೀನವಾಗಿದ್ದಾಳೆ.
ಬಿ.ಸಿ.ರೋಡು ನಗರದಲ್ಲಿ ಅತೀ ಹೆಚ್ಚು ವಸತಿ ಸಂಕೀರ್ಣ,ಮನೆಗಳು,ಹೊಟೇಲ್ ಗಳ ಇದ್ದು,ಇವುಗಳ ಮಲೀನ ನೀರು  ಚರಂಡಿಯ ಮೂಲಕ ನದಿ ಸೇರಿದರೆ,ತ್ಯಾಜ್ಯವಸ್ತುಗಳು,ಬಾಟಲ್ ಸಹಿತ ಇನ್ನಿತರ ವಸ್ತುಗಳು ನದಿ ನೀರಿನಲ್ಲಿ ತೇಲಾಡುತ್ತ ಇರುವುದನ್ನು ಕಾಣಬಹುದಾಗಿದೆ.
ಬಿ.ಸಿ.ರೋಡಿನ ಮಪತ್ ಲಾಲ್ ಲೇಔಟ್,ಆರಾಧ್ಯ ಲೇಔಟ್ ಬಳಿ,ಬಸ್ತಿಪಡ್ಪು,ಕಂಚಿಕಾರಪೇಟೆ,ಗೂಡಿನ ಬಳಿ ಹಾಗೂ ಬಂಟ್ವಾಳ ಬಡ್ಡಕಟ್ಟೆ ಮಟನ್ ಸ್ಟಾಲ್ ಹಿಂಭಾಗ , ತಿರುಮಲ ವೆಂಕಟರಮಣ ದೇವಾಲಯದ ನದಿಕಿನಾರೆ ಬಳಿ ಸೇರಿದಂತೆ ಪಾಣೆಮಂಗಳೂರಿನ ವಿವಿಧ ಕಡೆಗಳಲ್ಲಿ ಹೀಗೆ ಸದ್ಯಕ್ಕೆ ಸುಮಾರು12 ಕಡೆಗಳಲ್ಲಿ ಕೊಳಚೆ  ನೀರು ನೇತ್ರಾವತಿ ನದಿ ಸೇರುತ್ತದೆ.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸಹಿತವಾಗಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಲಕ್ಷಾಂತರ ಮಂದಿ ಈ ಕೊಳಕು,ತ್ಯಾಜ್ಯದಿಂದ ತೇಲಾಡುವ ನದಿ ನೀರನ್ನು ಬಳಕೆ ಮಾಡುತ್ತಿದ್ದರೂ ದಪ್ಪ ಚರ್ಮದ ಈ ಅಧಿಕಾರಿಗಳಿಗೆ ಏನೂ ಅನ್ನಿಸದಿರುವುದು ಅಚ್ಚರಿಯೇ ಸರಿ!
ಒಳಚರಂಡಿ ಯೋಜನೆ ನೆನೆಗುದಿಗೆ:
ಬಂಟ್ವಾಳ ಪುರಸಭೆಗೆ 2011 ರಲ್ಲಿ ಮೊದಲ ಹಂತವಾಗಿ 16.62 ಕೋ.ರೂ.ವೆಚ್ಚದ ಒಳಚರಂಡಿ ಯೋಜನೆಗೆ ಮಂಜೂರಾತಿ ದೊರೆತು‌ ಕಾಮಗಾರಿಯು ಆರಂಭಗೊಂಡಿತ್ತು.

 ಪುರಸಭೆಯ ಬೌಗೋಳಿಕ ಸ್ಥಿತಿಗನುಸಾರವಾಗಿ 7 ವೆಟ್ ವೆಲ್ ಹಾಗೂ 2 ಮಲೀನ ನೀರು ಶುದ್ದೀಕರಣ ಘಟಕ ನಿರ್ಮಾಣವಾಗಬೇಕು,ಇದನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಗತಗೊಳಿಸಬೇಕಾಗಿದ್ದು, ಗುತ್ತಿಗೆ ವಹಿಸಿಕೊಂಡವರು ಕಾಮಗಾರಿಯನ್ನು ಆರಂಭಿಸಿದ್ದರು.ವೆಟ್ ವೆಲ್ ಮತ್ತು ಮಲೀನ ನೀರು ಶುದ್ದೀಕರಣ ಘಟಕಕ್ಕೆ ಜಮೀನು ಕೂಡ ಗುರುತಿಸಲಾಗಿತ್ತು.ಈಪೈಕಿ ವೆಟ್ ವೆಲ್ ನಿರ್ಮಾಣಕ್ಕೆ ಐದು ಕಡೆ ಜಮೀನು ಸಂಬಂಧಪಟ್ಟವರಿಗೆ ಹಸ್ತಾಂತರವಾದರೆ,ಎರಡು ಕಡೆ ಜಮೀನು ಹಸ್ತಾಂತರವಾಗಿಲ್ಲ,ಒಂದು ಕಡೆ ನ್ಯಾಯಾಲಯದ ತಡೆಯಾಜ್ಞೆ ಇದ್ದರೆ,ಮತ್ತೊಂದು ಕಡೆಯ ಜಮೀನಿನಲ್ಲಿ ದೊಡ್ಡಮಟ್ಟದ ಗೋಲ್ ಮಾಲ್ ನಡೆದಿದೆ ಎಂದು ಗುರುವಾರ ನಡೆದ ಪುರಸಭೆಯ ಸಾಮಾನ್ಯಸಭೆಯಲ್ಲಿ ಗಂಭೀರವಾದ ಚರ್ಚೆನಡೆದಿತ್ತು.

ಹಿರಿಯ ಸದಸ್ಯ ಗೋವಿಂದಪ್ರಭು ಅವರು‌ ಕೆಲ ದಾಖಲೆಯನ್ನು ಮುಂದಿಟ್ಟು ಈ ವಿಚಾರವಾಗಿ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದರು.ಕಂದಾಯ ಇಲಾಖೆಯು ಇದರಲ್ಲಿ ಶಾಮೀಲಾಗಿದೆ ಎಂದು ಆರೋಪಿಸಿದ್ದರು.ಆದರೆ ಆಡಳಿತಪಕ್ಷದಿಂದ ಅಥವಾ ಅಧಿಕಾರಿಗಳಿಂದ  ಸ್ಪಷ್ಟ ಉತ್ತರ ಮಾತ್ರ ಸಿಕ್ಕಿರಲಿಲ್ಲ.
ಮೊದಲ ಹಂತದ ಒಳಚರಂಡಿ ಯೋಜನೆಯ ಕಾಮಗಾರಿ ಬಿ.ಮೂಡ ಗ್ರಾಮದಲ್ಲಿ ಏನೋ ಕಾರ್ಯರೂಪಕ್ಕೆ ಬಂದಿತ್ತಾದರೂ,ಬಂಟ್ವಾಳ ಕಸ್ಬಗ್ರಾಮದತ್ತ‌ ಸುಳಿಯಲೇ‌ಇಲ್ಲ,ಅದಾಗಲೇ ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನಗಳು ಉಂಟಾಗಿ ಲೋಕಾಯುಕ್ತಕ್ಕು ದೂರು ಸಲ್ಲಿಕೆಯಾಗಿತ್ತು.

ಪ್ರಸ್ತುತ ರಸ್ತೆ ಅಗೆದು ನಿರ್ಮಿಸಲಾದ ವೆಟ್ ವೆಲ್ ಗಳನ್ನು ಟಾಚ್೯ ಲೈಟ್ ಹಾಕಿ ಹುಡುಕಬೇಕಾದ ಪರಿಸ್ಥಿತಿ ಉಂಟಾಗಿದೆ.ಒಂದೆರಡು ವೆಟ್ ವೆಲ್ ಕಾಣಲು ಸಿಗತ್ತದೆಯಾದರೂ ಅದನ್ನು ಪೊದೆಗಳು ಅವರಿಸಿದ್ದು,ಸದ್ಯ‌ಊಟಕ್ಕಿಲ್ಲದ ಉಪ್ಪಿನ ಕಾಯಿಂತಾಗಿದೆ.
ಈ ಮಧ್ಯೆ ಎರಡನೇ ಹಂತದ ಒಳಚರಂಡಿ ಯೋಜನೆಗೆ 56.54 ಕೋ.ರೂ.ಮಂಜೂರುಗೊಂಡು ವರ್ಷವೇ ಉರುಳಿದೆ.ಆದರೂ ಬಂಟ್ವಾಳ ಪುರವಾಸಿಗೆ ಒಳಚರಂಡಿಯೋಜನೆಯ ಕನಸು ಕನಸಾಗಿಯೇ ಉಳಿದಿದೆ.ತ್ಯಾಜ್ಯವಸ್ತು,ಕೊಳಚೆ ನೀರು ನೇರ ನದಿಗೆ ಸೇರಿ ಮಲೀನವಾಗಿರುವ ನೇತ್ತಾವತಿ ಶುಭ್ರನೀಲಿ ಬಣ್ಣದಲ್ಲಿ ಕಾಣಬೇಕಾಗುವ ಬದಲು ದಪ್ಪ ಹಸಿರು ಬಣ್ಣಕ್ಕೆ ತಿರುಗಿದ್ದಾಳೆ.ಅದನ್ನೇ ಬಂಟ್ವಾಳ ಮತ್ತು ಮಮನಪಾ ಜನತೆ ಕುಡಿಯುತ್ತಿದ್ದಾರೆ.
ಈ ನೀರನ್ನು ಪರೀಕ್ಷೆಗೊಳಪಡಿಸಿದರೆ ಉಪಯೋಗಕ್ಕೆ ಬಳಸುವುದೇ ಅಪಾಯ ಎಂಬ ವರದಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ,ಹಾಗಾಗಿ ಜಿಲ್ಲಾಧಿಕಾರಿಯವರು,ಮನನಪಾ ಆಯುಕ್ತರು ಒಮ್ಮೆ ಪುರುಸೊತ್ತು ಮಾಡಿಕೊಂಡು ಬಂಟ್ವಾಳದಲ್ಲಿ ಚರಂಡಿಯಲ್ಲಿ‌ಹರಿಯುವ ಕೊಳಚೆ ನೀರು ನೇರ ನೇತ್ರಾವತಿ ನದಿ ನೀರಿಗೆ ಸೇರುವ ಆಯಕಟ್ಟಿನ ಜಾಗ ಪರಿಶೀಲಿಸಿ,ದಿಟ್ಟ ಕ್ರಮ ಕೈಗೊಳ್ಳಬೇಕೆಂಬುದು ಜನರ ಆಗ್ರಹವಾಗಿದೆ.

ಸ್ಮಾಟ್ ೯ ಸಿಟಿಗೆ ಮಲೀನ ನೀರು:
 ಮಂಗಳೂರು ಸ್ಮಾಟ್ ೯ ಸಿಟಿ‌ ಎನ್ನುತ್ತಾರೆ,ಅಲ್ಲಿನ ಜನತೆ ಬಂಟ್ವಾಳದಲ್ಲಿ ಹರಿಯುವ ನೇತ್ರಾವತಿ ನದಿಯ ಮಲೀನ ನೀರನ್ನು ಕುಡಿಯುವ ಪರಿಸ್ಥಿತಿ ಇದೆ.ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸಮರ್ಪಕವಾದ ಒಳಚರಂಡಿ ಇಲ್ಲದ ಪರಿಣಾಮ ಸುಮಾರು 12 ಕಡೆಗಳಲ್ಲಿ ಕೊಳಚೆ ನೀರು ನೇರವಾಗಿ ನೇತ್ರಾವತಿ ನದಿಯ ಒಡಲು ಸೇರುತ್ತಿದೆ.ಇದನ್ನೇ ಮಂಗಳೂರು,ಬಂಟ್ವಾಳದ ಜನತೆ ಕುಡಿಯಲು ಇದೇ ನೀರನ್ನು ಬಳಕೆ ಮಾಡುತ್ತಿದ್ದು, ಲಕ್ಷಾಂತರ ಜನರ ಬದುಕಿನ ಪ್ರಶ್ನೆಯಾಗಿದೆ.
ಬಿ.ಮೂಡ ಗ್ರಾಮದಲ್ಲಿ ಮೊದಲ ಹಂತದ ಒಳಚರಂಡಿ ಕಾಮಗಾರಿಯನ್ನು  ಪೂರ್ಣಗೊಳಿಸದೆ ಬಂಟ್ವಾಳದಲ್ಲಿ ಆರಂಭಿಸಿದರೆ ತಾನು ಏಕಾಂಗಿಯಾದರೂ ಧರಣಿ ಕೂರಲು ಸಿದ್ದನಿದ್ದೆನೆ.  ಇದರಲ್ಲಿ ಯಾವುದೇ ರಾಜಿ ಇಲ್ಲ ಹಲವು ವರ್ಷದಿಂದ ಇದಕ್ಕಾಗಿ ಹೋರಾಟ ಮಾಡುತ್ತಾ ಬರುತ್ತಿದ್ದೆನೆ.ಹಾಗಾಗಿ ಜಿಲ್ಲಾಧಿಕಾರಿಯವರು ಕೊಳಚೆ ನೀರು ಹರಿಯುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು.
ಎ.ಗೋವಿಂದಪ್ರಭು
ಹಿರಿಯ ಸದಸ್ಯರು

 ಬಂಟ್ವಾಳಪುರಸಭೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter