ಕಲ್ಕುಟ ಕೊಳದಬಳಿಯ ಕೆರೆ ಅಭಿವೃದ್ಧಿ, ಸುಂದರೀಕರಣ ಅನುದಾನ ಕೋರಿ ಲೋಕೋಪಯೋಗಿ ಸಚಿವರಿಗೆ ಮನವಿ
ಬಂಟ್ವಾಳ: ತಾಲೂಕಿನ ಕರಿಯಂಗಳ ಗ್ರಾಮದ ಕಲ್ಕುಟ ಕೊಳದಬಳಿ ಕೆರೆ ಅಭಿವೃದ್ಧಿ, ಸುತ್ತಲಿನ ಸುಂದರೀಕರಣ ಹಾಗೂ ಪ್ರವಾಸಿ ಮಂದಿರ ನಿರ್ಮಾಣಕ್ಕೆ 125.00 ಲಕ್ಷ ರೂ. ಅನುದಾವನ್ನು ಲೋಕೋಪಯೋಗಿ ಇಲಾಖಾ ವತಿಯಿಂದ ಮಂಜೂರುಗೊಳಿಸುವಂತೆ ಒತ್ತಾಯಿಸಿ ಕರಿಯಂಗಳ ಗ್ರಾ.ಪಂ.ನ ಮಾಜಿ ಅಧ್ಯಕ್ಷರ ನೇತೃತ್ವದ ನಿಯೋಗ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದೆ.

ಮಂಗಳವಾರ ಪೊಳಲಿ-ಅಡ್ಡೂರು ಸೇತುವೆ ದುರಸ್ಥಿ ಕಾಮಗಾರಿಯ ಪರಿಶೀಲನೆಗಾಗಮಿಸಿದ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕೊಹೊಳಿ ಅವರನ್ನು ಭೇಟಿಯಾದ ಕರಿಯಂಗಳ ಗ್ರಾ.ಪಂ.ನ ಮಾಜಿ ಅಧ್ಯಕ್ಷ,ಹಾಲಿ ಸದಸ್ಯ ಚಂದ್ರಹಾಸ ಪಲ್ಲಿಪಾಡಿ ಅವರ ನೇತೃತ್ವದ ನಿಯೋಗ ಅಂದಾಜು ಪಟ್ಟಿ, ಮುನ್ನೋಟ ನಕ್ಷೆ,ಕೆರೆಯ ಛಾಯಾಚಿತ್ರವನ್ನೊಳಗೊಂಡ ವಿವಿಧ ದಾಖಲೆಯೊಂದಿಗೆ ಗ್ರಾ.ಪಂ.ವತಿಯಿಂದ ಲಿಖಿತ ಮನವಿ ಸಲ್ಲಿಸಿ ಅನುದಾನ ಮಂಜೂರಾತಿಗೆ ಒತ್ತಾಯಿಸಿತು.
ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಕುಟ ಕೊಳದ ಬಳಿರುವ 7.24 ವಿಸ್ತೀರ್ಣದ ಕಂಬಳ ಕೆರೆಯನ್ನು ಅಭಿವೃದ್ಧಿ ಪಡಿಸಲು ಕರಿಯಂಗಳ ಗ್ರಾಮ ಪಂಚಾಯತ್ ವತಿಯಿಂದ ಕೇಂದ್ರ ಸರಕಾರದ ಅಮೃತ ಸರೋವರ ಯೋಜನೆಯಡಿ ಕೆರೆ ಅಭಿವೃದ್ಧಿಗಾಗಿ ರೂಪುರೇಷೆ,ಮುನ್ನೋಟ ನಕ್ಷೆ ಸಿದ್ಧಪಡಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಕೆರೆಯನ್ನು ಮಾದರಿ ಕೆರೆಯನ್ನಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನರೇಗಾ ಯೋಜನೆಯಡಿ 39 ಲಕ್ಷ ರೂ.,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 10 ಲಕ್ಷ ರೂ.ಹಾಗೂ ಎಂ.ಆರ್. ಪಿ.ಎಲ್ ಸಂಸ್ಥೆಯಿಂದ 6.75 ಲಕ್ಷ ರೂ ಅನುದಾನ ಬಳಸಿಕೊಂಡು ಕಾಮಗಾರಿಯನ್ನು ನಡೆಸಲಾಗುತ್ತಿದ್ದು,ಸದ್ಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಕೆರೆಯ ಸುತ್ತಲಿನ ರಸ್ತೆ ನಿರ್ಮಾಣ ಕಾಮಗಾರಿ, ಸುಂದರೀಕರಣ ಹಾಗೂ ಪ್ರವಾಸಿ ಮಂದಿರದ ನಿರ್ಮಾಣಕ್ಕಾಗಿ ಸುಮಾರು 125.00 ಲಕ್ಷ ರೂ.ಅನುದಾನದ ಅವಶ್ಯಕತೆಯಿದ್ದು,ಇದನ್ನು ಲೋಕೋಪಯೋಗಿಇಲಾಖಾವತಿಯಿಂದ ಮಂಜೂರುಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಶಾಸಕ ರಾಜೇಶ್ ನಾಯ್ಕ್ ಅವರು ಸಚಿವ ಜಾರಕಿಹೊಳಿ ಜೊತೆಗಿದ್ದರು.
ನಿಯೋಗದಲ್ಲಿ ಗ್ರಾ.ಪಂ.ಅಧ್ಯಕ್ಷೆ ರಾಧಲೋಕೇಶ್ ,ಉಪಾಧ್ತಕ್ಷ ರಾಜುಕೋಟ್ಯಾನ್,ಸದಸ್ಯ ಲಕ್ಷ್ಮೀಶ್ ಶೆಟ್ಟಿ ಮತ್ತಿತರರಿದ್ದರು.