ಬಂಟ್ವಾಳ: ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೆ, ಡಾ. ವೇಣುಗೋಪಾಲ ಶರ್ಮಗೆ ವಿಷ್ಣು ಪ್ರಸಾದ ಪ್ರಶಸ್ತಿ ಪ್ರದಾನ

ಬಂಟ್ವಾಳ: ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರತಿಷ್ಠಾವರ್ಧಂತಿ ಹಾಗೂ ವರ್ಷಾವಧಿ ಜಾತ್ರೆ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಕ್ಷೇತ್ರದ ವತಿಯಿಂದ ಕೊಡ ಮಾಡುವ “ವಿಷ್ಣು ಪ್ರಸಾದ ಪ್ರಶಸ್ತಿ”ಯನ್ನು ವೈದ್ಯರೆಂದೇ ಖ್ಯಾತಿಯ ಗುರುವಾಯನಕೆರೆ ಡಾ. ವೇಣುಗೋಪಾಲ ಶರ್ಮ ಅವರಿಗೆ ಪ್ರದಾನ ಮಾಡಲಾಯಿತು. ಮಾಜಿ ಸಚಿವ ಬಿ.ರಮಾನಾಥ ರೈ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಸೇವೆಯಿಂದ ಸಾರ್ಥಕತೆ ಎಂಬ ಧ್ಯೇಯ ವಾಕ್ಯದಂತೆ ಆರೋಗ್ಯ, ಶಿಕ್ಷಣ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಡಾ. ವೇಣುಗೋಪಾಲ ಶರ್ಮ ಅವರ ಸೇವಾ ಕಾರ್ಯ ಅಭಿನಂದನೀಯ ಎಂದು ಹೇಳಿದರು.
ಸಮಾಜ ಮುಖಿ ಕಾರ್ಯಗಳಿಂದ ಸಾವಿರಾರು ಜನತೆಯ ಕಣ್ಣೀರೊರೆಸುವ ಕಾರ್ಯ ಮಾಡುತ್ತಿರುವವರನ್ನು ಗುರುತಿಸಿ ಗೌರವಿಸುವುದು ಪಾಂಗಲ್ಪಾಡಿ ದೇವಸ್ಥಾನದ ಆಡಳಿತ ಸಮಿತಿಯ ಉತ್ತಮ ಕಾರ್ಯ ಎಂದು ಹೇಳಿದರು.ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಸೇವೆಯೇ ಜನಾರ್ದನ ಸೇವೆ ಎಂಬಂತೆ ಜನ ಸೇವಾ ಕಾರ್ಯದಿಂದ ದೇವರು ಸಂಪ್ರೀತಗೊಳ್ಳುವನು ಎಂದರು.
ಉಪನ್ಯಾಸಕ ಡಾ.ಯೋಗೀಶ ಕೈರೋಡಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.ಧಾರ್ಮಿಕ ಪರಿಷತ್ ದ.ಕ.ಜಿಲ್ಲಾ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮೋಹನ ಶೆಟ್ಟಿ ನರ್ವಲ್ದಡ್ಡ ,ವಾಮದಪದವು ಪ್ರಕೃತಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಹಲೆಕ್ಕಿ, ಹೊಸಪಟ್ನ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಕಿಶೋರ್‌ಕುಮಾರ್ ನಾಯರ್ ಕುಮೇರ್, ವಾಮದಪದವು ಸ.ಪ.ಪೂ.ಕಾಲೇಜು ಚಿತ್ರಕಲಾ ಶಿಕ್ಷಕ ಮುರಳೀಕೃಷ್ಣ ವೇದಿಕೆಯಲ್ಲಿದ್ದರು.
ವ್ಯವಸ್ಥಾಪನ ಸಮಿತಿ ನಿಕಟಪೂರ್ವ ಸದಸ್ಯರು, ಭಜನ ಮಂಡಳಿ ಸದಸ್ಯರು, ಈ ಸಂದರ್ಭದಲ್ಲಿ ಪರಿಸರದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ವ್ಯವಸ್ಥಾಪನ ಸಮಿತಿ ನಿಕಟಪೂರ್ವ ಅಧ್ಯಕ್ಷ ಡಾ.ರಾಮಕೃಷ್ಣ ಎಸ್.ಅವರು ಸ್ವಾಗತಿಸಿದರು. ದಯಾನಂದ ಎರ್ಮೆನಾಡು ವಂದಿಸಿದರು. ಸತೀಶ ಕರ್ಕೇರ ಸಹಕರಿಸಿದರು.ಎಚ್ಕೇ ನಯನಾಡು ಕಾರ್ಯಕ್ರಮ ನಿರೂಪಿಸಿದರು.