ನ.30 ರಂದು ಕಕ್ಯಪದವು-ಮೈರ “ಸತ್ಯ-ಧರ್ಮ” ಜೋಡುಕರೆ ಬಯಲು ಕಂಬಳ
ಬಂಟ್ವಾಳ : ತಾಲೂಕಿನ ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ೧೨ನೇ ವರ್ಷದ ಹೊನಲು ಬೆಳಕಿನ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳವು ನ.೩೦ರಂದು ಜರಗಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ್ ಬಜ ಮತ್ತು ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ದಿನೇಶ್ ಪೂಜಾರಿ ಕುಕ್ಕಾಜೆ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ ಕಂಬಳಕ್ಕೆ ಚಾಲನೆ ದೊರಕಲಿದ್ದು, ವೇ.ಮೂ.ರಾಘವೇಂದ್ರ ಭಟ್ ಕೊಡಂಬೆಟ್ಟು ಅವರ ಪೌರೋಹಿತ್ಯದಲ್ಲಿ ಉದ್ಯಮಿಗಳಾದ ವಿಜಯ ವಿ.ಕೋಟ್ಯಾನ್ ಮತ್ತು ರೋಹಿತ್ ಪೂಜಾರಿ ಉಡ್ಕುಂಜ ಅವರು ಕಂಬಳವನ್ನು ಉದ್ಘಾಟಿಸಲಿದ್ದಾರೆ. ಪ್ರಗತಿಪರ ಕೃಷಿಕ ಶಿವಪ್ಪ ಪೂಜಾರಿ ಜೇಡರಬೆಟ್ಟು, ಗೆಳೆಯರ ಬಳಗದ ಅಧ್ಯಕ್ಷ ದಿನೇಶ್ ಪೂಜಾರಿ ಕುಕ್ಕಾಜೆ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಸಂಜೆ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಸಭಾಧ್ಯಕ್ಷ ತೆ ವಹಿಸಲಿರುವರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಸಂಸದ ಕ್ಯಾ| ಬೃಜೇಶ್ ಚೌಟ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ. ಎಂ ಎನ್. ರಾಜೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಸಾಧಕರಾದ ಇರುವೈಲು ಪಾಣಿಲ ಕಂಬಳ ಕೋಣಗಳ ಯಜಮಾನ ಸತೀಶ್ಚಂದ್ರ ಸಾಲ್ಯಾನ್,ಕಂಬಳ ಸಹಾಯಕ ಜಾನ್ ಸಿರಿಲ್ ಡಿಸೋಜಾ ,ಉಪ್ಪಿನಂಗಡಿ ದಂತ ವೈದ್ಯ ಡಾ.ರಾಜಾರಾಮ್ ಕೆ.ಬಿ.,ಹಿರಿಯ ಕಂಬಳ ಓಟಗಾರ ಮಂಜುನಾಥ ಭಂಡಾರಿ ನಕ್ರೆ ಅವರನ್ನು ಸನ್ಮಾನಿಸಲಾಗುವುದು.
ಕಂಬಳ ಕೂಟದಲ್ಲಿ ವಿವಿಧ ವಿಭಾಗದಲ್ಲಿ ೨೦೦ ಜತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.