ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಳವು ಪ್ರಕರಣದಲ್ಲಿ ಮೂವರು ಕುಖ್ಯಾತ ಕಳ್ಳರ ಬಂಧನ

ಬಂಟ್ವಾಳ:ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳ್ಳಿ, ಆಭರಣ ಹಾಗೂ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಬಿಗ್ ಅಪ್ಡೇಟ್ ನೀಡಿದ್ದಾರೆ. ಹಾಗೂ ಈ ಪ್ರಕರಣ ಬೇಧಿಸುವಲ್ಲಿ ವಿಶೇಷ ಪೊಲೀಸರ ತಂಡ ಯಶಸ್ವಿಯಾಗಿದ್ದಾರೆ. ಮೂವರು ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ,ಹೊಸದುರ್ಗ ತಾಲೂಕಿನ ಚೆರ್ವತ್ತೂರು ಗ್ರಾಮದ ಪಿಲಾವಲಪ್ಪು ಕೊರೊಕ್ ಪರಂಬು ನಿವಾಸಿ ಬಶೀರ್ ಕೆ ಪಿ. ಆಕ್ತಿ ಬಶೀರ್(44 ), ಕೊಲ್ಲಂ ಜಿಲ್ಲೆಯ ಕರುನಾಗಪಲ್ಲಿ ತಾಲೂಕಿನ ಆಲಪ್ಪಾಡ್ ಗ್ರಾಮದ ತುಯ್ಚಿಯಿಲ್ ವೀಡು ನಿವಾಸಿ
ಪ್ರಕಾಶ್ ಬಾಬು ಯಾನೆ ಮಹಮ್ಮದ್ ನಿಯಾಝ್(46) ಬಂಟ್ಚಾಳ ತಾಲೂಕಿನ ಪುದುಗ್ರಾಮದ ಪುಂಚಮೆ ನಿವಾಸಿ ಎನ್. ಜೆ. ಮಹಮ್ಮದ್ ಇಸ್ಮಾಯಿಲ್ (53) ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ.
ಬಂಧಿತ ಆರೋಪಿಗಳಿಂದ 1.25 ಲ.ರೂ.ಮೌಲ್ಯದ ಬೆಳ್ಳಿ, ಆಭರಣ, ಕೃತ್ಯಕ್ಕೆ ಬಳಸಿದ್ದ ಅನೋವಾ ಕಾರನ್ನು ಪೊಲೀಸರು ವಶಪಡಿಸಿದ್ದಾರೆ. ದ.ಕ ಜಿಲ್ಲಾ ಪೊಲೀಸರ ವಿಶೇಷ ತಂಡ ಇರಾ ಎಂಬಲ್ಲಿ ಕಾರ್ಯಾಚರಣೆ ನಡೆಸಿ ಈ ಮೂವರು ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ.
ಆರೋಪಿಗಳ ಪೈಕಿ ಬಶೀರ್ ಕೆ.ಪಿ. ಎಂಬಾತನು ಕುಖ್ಯಾತ ಕಳ್ಳನಾಗಿದ್ದು, ಈತನ ವಿರುದ್ಧ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಸುಮಾರು 13 ಕಳ್ಳತನ ಪ್ರಕರಣಗಳು ದಾಖಲಾಗಿದೆ. ಆರೋಪಿ ಪ್ರಕಾಶ್ ಬಾಬು ಯಾನೆ ಮಹಮ್ಮದ್ ನಿಯಾಝ್ ಎಂಬಾತನ ವಿರುದ್ಧ 3 ಕಳ್ಳತನ ಪ್ರಕರಣಗಳು ದಾಖಲಾಗಿದೆ ಎಂದು ಹೇಳಲಾಗಿದೆ. ದ.ಕ. ಜಿಲ್ಲಾ ಪೊಲೀಸ್ ಆಧೀಕ್ಷಕರಾದ ಯತೀಶ್ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಜೇಂದ್ರ ಡಿ.ಎಸ್ ಅವರ ನೇತೃತ್ವದಲ್ಲಿ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಎಸ್. ವಿಜಯಪ್ರಸಾದ್ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಶಿವಕುಮಾರ್ ಮತ್ತು ಪಿಎಸ್‌ಐ ಗಳಾದ ಹರೀಶ್ ಎಮ್ .ಆರ್, ನಂದಕುಮಾರ್, ಲೋಲಾಕ್ಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ಸಿಬ್ಬಂದಿಗಳಾದ ಉದಯ ರೈ, ಪ್ರವೀಣ್ ಎಮ್, ಆದ್ರಾಮ, ಹರಿಶ್ಚಂದ್ರ, ನಝೀರ್, ಕೃಷ್ಣ ,ರಮ್ಜಾನ್ ಕುಮಾರ, ಮಹಾಂತೇಶ್ ಮತ್ತು ಜಿಲ್ಲಾ ಗಣಕಯಂತ್ರ ವಿಭಾಗದ ಸಂಪತ್, ದಿವಾಕರ ಈ ಕಾರ್ಯಚರಣೆಯಲ್ಲಿ ಭಾಗವಹಿಸಿದರು.
ನ.4 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಬಾಗಿಲಿನ ಚಿಲಕ ಮುರಿದು ಒಳಪ್ರವೇಶಿಸಿದ ಕಳ್ಳರು, ಬೆಳ್ಳಿಯ ಆಚರಣಗಳನ್ನು ಹಾಗೂ ನಗದನ್ನು ಕಳವು ಮಾಡಿದ ಮಾಡಿದ್ದಾರೆ. ಅಲ್ಲದೆ ದೇವಳದ ಕಚೇರಿಯಲ್ಲಿ ಸಿಸಿ ಕ್ಯಾಮರದ ಡಿವಿಆರ್ ಕೂಡ ಕದ್ದಿದ್ದಾರೆ. ಈ ಕಳವು ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿತ್ತು.ಇದರ ಹಿಂದಿನದಿನ ಬೆಳಗ್ಗಿನ ಜಾವ ಸುಜೀರು ದೇವಕಿ ಕೃಷ್ಣ ರವಳನಾಥ ದೇವಳದಲ್ಲಿ ಕಳವು ಕೃತ್ಯ ನಡೆದಿತ್ತು.ಈ ಎರಡು ಕಳವು ಪ್ರಕರಣ ಹೆಚ್ಚುಕಡಿಮೆ ಒಂದೇ ರೀತಿಯಲ್ಲಿನಡೆದಿತ್ತು.ಇದೀಗ ತುಂಬೆ ದೇವಳದಲ್ಲಿನಡೆದ ಕಳವು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.