ಒಕ್ಕೂಟ ರಚನೆಗೆ ನಿರ್ಧಾರ
ಜಿಲ್ಲಾ ಶಾಮಿಯಾನ ಮಾಲೀಕರ ಸಂಘ ಜಂಟಿ ಸಮಾಲೋಚನಾ ಸಭೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲೀಕರ ಸಂಘದ ನೇತೃತ್ವದಲ್ಲಿ ಜಿಲ್ಲಾ ಕ್ಯಾಟರಿಂಗ್, ಧ್ವನಿ, ಬೆಳಕು ಹಾಗೂ ಪ್ಲವರ್ ಡೆಕೋರೇಶನ್ ಮಾಲೀಕರ ಸಂಘಗಳ ಜಂಟಿ ಸಮಾಲೋಚನಾ ಸಭೆ ಶಾಮಿಯಾನ ಮಾಲೀಕರ ಸಂಘದ ಜಿಲ್ಲಾ ಅಧ್ಯಕ್ಷ ಬಾಬು ಕೆ. ವಿಟ್ಲ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದು, ಒಕ್ಕೂಟ ರಚನೆಗೆ ನಿರ್ಧರಿಸಲಾಯಿತು.
ಏಕರೂಪಿ ದರ ಪಟ್ಟಿ ಪಾಲನೆ, ಬಿಲ್ ವಸೂಲಾತಿ ಮೊದಲಾದ ಸಮಸ್ಯೆಗಳನ್ನು ಸರಿಪಡಿಸಲು ಒಗ್ಗಟ್ಟಿನಲ್ಲಿ ಸಮನ್ವಯತೆಯಿಂದ ಗ್ರಾಹಕರಿಗೆ ನ್ಯಾಯಯುತ ಸೇವೆ ನೀಡಲು ಒಕ್ಕೂಟ ರಚನೆಯಿಂದ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ನ.5ರಂದು ಸಭೆ ನಡೆಸಿ, ರೂಪುರೇಷೆಗಳನ್ನು ಸಿದ್ದಪಡಿಸಲು ಉದ್ದೇಶಿಸಲಾಗಿದೆ.
ಈ ಸಂದರ್ಭ ಮಾತನಾಡಿದ ಬಾಬು ಕೆ. ವಿಟ್ಲ ಅವರು, ಜಿಲ್ಲೆಯಲ್ಲಿ 8 ವರ್ಷಗಳಿಂದ ಶಾಮಿಯಾನ ಮಾಲೀಕರ ಸಂಘ ಕಾರ್ಯಾಚರಿಸುತ್ತಿದೆ. 650 ಸದಸ್ಯರಿದ್ದು, 11 ಸಾವಿರಕ್ಕೂ ಅಧಿಕ ಮಂದಿ ಕೆಲಸಗಾರರಿದ್ದಾರೆ. ಕ್ಯಾಟರಿಂಗ್, ಧ್ವನಿ, ಬೆಳಕು ಹಾಗೂ ಪ್ಲವರ್ ಡೆಕೋರೇಶನ್ ಮಾಲೀಕರ ಸಂಘಗಳಲ್ಲಿ ಒಟ್ಟು 4 ಸಾವಿರ ಸದಸ್ಯರಿದ್ದು, 30 ಸಾವಿರಕ್ಕೂ ಅಧಿಕ ಮಂದಿ ಕೆಲಸಗಾರರಿದ್ದಾರೆ. ಸಂಘಟಿತರಾಗಿ, ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಉದ್ದೇಶದಿಂದ ಒಕ್ಕೂಟ ರಚನೆ ಮಾಡಲಾಗುತ್ತಿದೆ. ಎಲ್ಲಾ ಸಂಘಗಳ ಸದಸ್ಯರು ಒಪ್ಪಿಗೆ ನೀಡಿದ್ದಾರೆ ಎಂದರು.
ಜಿಲ್ಲಾ ಶಾಮಿಯಾನ ಮಾಲೀಕರ ಸಂಘದ ಕೋಶಾಧಿಕಾರಿ ನಿಶಿತ್ ಪೂಜಾರಿ ಮಾತನಾಡಿ, ಸಂಘದ ಸದಸ್ಯರಲ್ಲದವರಿಂದ ನಮ್ಮ ಉದ್ಯಮಕ್ಕೆ ತೊಂದರೆ ಉಂಟಾಗುತ್ತಿದೆ. ಗ್ರಾಹಕರಿಗೂ ಇದರಿಂದ ಅನ್ಯಾಯವಾಗುತ್ತಿದೆ. ಬಹಳಷ್ಟು ಸಂದರ್ಭಗಳಲ್ಲಿ ಬಿಲ್ ವಸೂಲಾತಿಗೆ ತೊಂದರೆಯಾಗುತ್ತಿದೆ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಒಕ್ಕೂಟ ರಚನೆಯಿಂದ ಸಾಧ್ಯವಾಗಲಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕ್ಯಾಟರಿಂಗ್ ಮಾಲೀಕರ ಸಂಘದ ಉಪಾಧ್ಯಕ್ಷ ವಿಜಯ ಕುಮಾರ್, ಧ್ವನಿ ಮತ್ತು ಬೆಳಕು ಮಾಲೀಕರ ಸಂಘದ ಜಿಲ್ಲಾ ಅಧ್ಯಕ್ಷ ಧನರಾಜ್ ಶೆಟ್ಟಿ, ಮಂಗಳೂರು ಘಟಕದ ಅಧ್ಯಕ್ಷ ಬೆನೆಟ್ ಡಿಸಿಲ್ವಾ, ಜಿಲ್ಲಾ ಪ್ಲವರ್ ಡೆಕೋರೇಟರ್ಸ್ ಮಾಲೀಕರ ಸಂಘದ ಅಧ್ಯಕ್ಷ ತುಷಾರ್ ಸುರೇಶ್, ಕಾರ್ಯಕ್ರಮದ ಸಂಯೋಜಕರಾದ ಗುರುದತ್ ಪೈ ಹಾಗೂ ನಿಶಿತ್ ಪೂಜಾರಿ, ಜಿಲ್ಲಾ ಶಾಮಿಯಾನ ಮಾಲೀಕರ ಸಂಘದ ಕಾರ್ಯದರ್ಶಿ ಮ್ಯಾಕ್ಸಿಮ್ ಸಿಕ್ವೇರ, ಮಂಗಳೂರು ಘಟಕದ ಅಧ್ಯಕ್ಷ ಬಾಲಕೃಷ್ಣ ಕದ್ರಿ, ಕಾರ್ಯದರ್ಶಿ ಸ್ಪಂದನ ನಾಗರಾಜ್,ಕೋಶಾಧಿಕಾರಿ ಗಾಡ್ವಿನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.