ನರಿಕೊಂಬು ಯುವಕ ಮಂಡಲದ ವತಿಯಿಂದ 56ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ
ಬಂಟ್ವಾಳ : ಹಬ್ಬ ಆಚರಣೆಗಳು ಕೇವಲ ಮನರಂಜನೆಗೆ ಸೀಮಿತವಾಗದೆ ಧಾರ್ಮಿಕ ಪರಂಪರೆಯನ್ನು ಮುಂದುವರಿಸವುದರ ಜತೆಗೆ ಭಗವದ್ಗೀತೆಯ ಸಂದೇಶ ಹಾಗೂ ಅದರ ಅರ್ಥವನ್ನು ಮಕ್ಕಳಿಗೆ ತಿಳಿಸುವ ಅಗತ್ಯತೆ ಇದೆ ಎಂದು ನರಿಕೊಂಬು ಏರಮಲೆ ಶ್ರೀ ಭದ್ರಕಾಳಿ ದೇವಸ್ಥಾನದ ಪ್ರಧಾನ ಅರ್ಚಕರಾದ ಕೇಶವಶಾಂತಿ ನಾಟಿ ಹೇಳಿದರು.

ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮೊಗರ್ನಾಡು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ವಠಾರದಲ್ಲಿ ನರಿಕೊಂಬು ಯುವಕ ಮಂಡಲ( ರಿ) ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ 56 ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇದೇ ವೇಳೆ ಚುಟುಕು ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನ ಮೊಗರ್ನಾಡು ಇದರ ಆಡಳಿತ ಮುಕ್ತೇಸರ ವೇದಮೂರ್ತಿ ಜನಾರ್ಧನ್ ಭಟ್ ಇವರನ್ನು ಯುವಕಮಂಡಲದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನವಜೀವನ ಗೇಮ್ಸ್ ಕ್ಲಬ್ ಕುರ್ಚಿಪಳ್ಳ ಹಾಗೂ ಸಾರ್ವಜನಿಕರ ಸಹಕಾರದಿಂದ ಶ್ರೀ ಕೃಷ್ಣದೇವರ ವೈಭವದ ಮೆರವಣಿಗೆ ನಡೆಯಿತು.ಪುಟಾಣಿ ಮಕ್ಕಳು ಶ್ರೀ ಕೃಷ್ಣ ವೇಷ ಧರಿಸಿ ಮೆರವಣಿಗೆಗೆ ಮೆರಗು ತಂದರು.
ವೇದಿಕೆಯಲ್ಲಿ ಶ್ರೀ ಕೃಷ್ಣನ ತೊಟ್ಟಿಲು ತೂಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಶೇಡಿಗುರಿ ಶಿಶುಮಂದಿರ, ದೊಂಪದಬಲಿ ಅಂಗನವಾಡಿ ಪುಟಾಣಿಗಳಿಂದ ಹಾಗೂ ನಿಶಾನೆ ಡ್ಯಾನ್ಸ್ ಗ್ರೂಪ್ ನರಿಕೊಂಬು ಇವರಿಂದ ವಿವಿಧ ನೃತ್ಯ ಕಾರ್ಯಕ್ರಮಗಳು ಜರಗಿತು.
ಅದೇರೀತಿ ಕಲಿಕೆಯಲ್ಲಿ ಪ್ರಥಮ ಸ್ಥಾನ ಪಡೆದ 1ನೇ ತರಗತಿಯಿಂದ 7ನೇ ತರಗತಿ ವರೆಗಿನ ನರಿಕೊಂಬು ಶಾಲಾ ಮಕ್ಕಳನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಾರುಮರ ಹತ್ತುವ ಸ್ಪರ್ಧೆ ನಡೆಸಿ ವಿಜೇತರಾದ ರಮೇಶ್ ರವರನ್ನು ಗೌರವಿಸಲಾಯಿತು.
ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್, ಬಂಟ್ವಾಳ ತಾಲೂಕು ಗಾಣಿಗರ ಸಂಘ(ರಿ ) ಪಾಣೆಮಂಗಳೂರು ಅಧ್ಯಕ್ಷ ರಘು ಸಫಲ್ಯ, ಉದ್ಯಮಿ ಉಮೇಶ್ ಬೋಳಂತೂರು, ಸ್ವರ್ಣೋದ್ಯಮಿ ಬಿಜು ಆಚಾರ್ಯ, ಹೇಮಚಂದ್ರ ಶಂಭೂರು, ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವರ್ಗದ ಅಧ್ಯಕ್ಷ ಉಮೇಶ್ ನೆಲ್ಲಿಗುಡ್ಡೆ, ಕೃಷ್ಣ ಕುಲಾಲ್, ನರಿ ಕೊಂಬು ಯುವಕ ಮಂಡಲದ ಗೌರವ ಅಧ್ಯಕ್ಷರುಗಳಾದ ಕೇಶವ ಪಿ ಎಚ್, ಪ್ರಕಾಶ್ ಕುಮಾರ್, ಅಧ್ಯಕ್ಷ ಮೋಹನ್ ಕುಲಾಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುದರ್ಶನ್ ಕುಲಾಲ್ ಸ್ವಾಗತಿಸಿ, ಪ್ರವೀಣ್ ವಂದಿಸಿದರು, ಅರ್ಚಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು.