ಮಂಗಳೂರು: ಮನೆಯ ಮಹಡಿ ಕುಸಿದು ಹಾನಿ, ಮನೆಮಂದಿ ಪವಾಡ ಸದೃಶ ಪಾರು
ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗಿವೆ. ಇದೀಗ ಮನೆಯ ಮಹಡಿಯೊಂದು ಕುಸಿದು ಪವಾಡ ಸದೃಢವಾಗಿ ಪಾರಾದ ಘಟನೆಯು ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ಮೇಲಂಗಡಿ ಮಸೀದಿ ಸಮೀಪ ನಡೆದಿದೆ.
ಉಳ್ಳಾಲ ನಗರಸಭೆಯ ಮಾಜಿ ಸಿಬ್ಬಂದಿ ಅಬ್ಬಾಸ್ ಎಂಬವರ ಮನೆಯ ಮಹಡಿ ಕುಸಿದಿದೆ. ಮನೆಮಂದಿಯೆಲ್ಲಾ ಮನೆ ಒಳಗಿದ್ದ ಸಂದರ್ಭದಲ್ಲೇ ಮಹಡಿಯೂ ಕುಸಿದಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಹಂಚಿನ ಮನೆಯಾಗಿದ್ದರಿಂದ ಹಂಚುಗಳು ಬೀಳಲು ಆರಂಭಗೊಳ್ಳುತ್ತಿದ್ದಂತೆ ಎಚ್ಚೆತ್ತ ಮನೆಯವರಾದ ಅಬ್ಬಾಸ್, ಅವರ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಆ ತಕ್ಷಣವೇ ಹೊರಗೆ ಓಡಿ ಬಂದಿದ್ದಾರೆ. ಘಟನೆಯಲ್ಲಿ ಅಬ್ಬಾಸ್ ಹಾಗೂ ಅವರ ಪುತ್ರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.