ಲಾರಿ ಮಗುಚಿ ಒರ್ವನ ಸಾವು,ನಾಲ್ವರಿಗೆ ಗಾಯ
ಬಂಟ್ವಾಳ: ಪಿಲಾತಬೆಟ್ಟು ಗ್ರಾಮದ ದೈಕಿನಕಟ್ಟೆ ಶ್ರೀ ರಾಮಾಂಜನೇಯ ಭಜನಾ ಮಂದಿರದ ಬಳಿಯ ತಿರುವಿನಲ್ಲಿ ಶಾಮಿಯಾನ ಅಂಗಡಿಯೊಂದಕ್ಕೆ ಸೇರಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾದ ಪರಿಣಾಮ ಸಂಸ್ಥೆಯ ಕಾರ್ಮಿಕ ಸ್ಥಳದಲ್ಲಿಯೇ ಮೃತಪಟ್ಟರೆ,ನಾಲ್ಕು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ನಡೆದಿದೆ.
ಫರಂಗಿಪೇಟೆ ನಿವಾಸಿ ಕಾರ್ತಿಕ್ ( 20) ಮೃತಪಟ್ಟವನೆಂದು ಗುರುತಿಸಲಾಗಿದೆ.ರಸ್ತೆ ಬದಿ ನಡೆದುಕೊಂಡು ಹೋಗುತ್ರಿದ್ದ ಮನೀಶ್ ಹಾಗೂ ಸಂದೀಪ್,ಲಾರಿಚಾಲಕ ಉಮ್ಮರ್ ಮತ್ತು ಕಾರ್ಮಿಕ ಅಖಿಲೇಶ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾವಳಪಡೂರು ಗ್ರಾಮದ ಮದ್ವದಲ್ಲಿರುವ ಶಾಮಿಯಾನ ಸಂಸ್ಥೆಗೆ ಸೇರಿದ ಐಶರ್ ಲಾರಿಯಲ್ಲಿ ಶಾಮಿಯಾನದ ಸಾಮಾಗ್ರಿಗಳನ್ನು ಬೆಳ್ತಂಗಡಿ ಕಡೆಗೆ ಕೊಂಡುಹೋಗುತ್ತಿದ್ದ ವೇಳೆ ದೈಕಿನಕಟ್ಟೆ ಶ್ರೀ ರಾಮಾಂಜನೇಯ ಭಜನಾ ಮಂದಿರದ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ರಸ್ತೆಗೆ ಮಗುಚಿ ಬಿದ್ದಿದೆ.ಪರಿಣಾಮ ವಿದ್ಯುತ್ ಕಂಬ ಜಖಂಗೊಂಡಿದ್ದಲ್ಲದೆ ಲಾರಿಯಲ್ಲಿದ್ದ ಚಾಲಕ ಉಮ್ಮರ್ ,ಕಾರ್ಮಿಕರಾದ ಕಾರ್ತಿಕ್,ಅಖಿಲೇಶ್ ಅಡಿಯಲ್ಲಿ ಸಿಲುಕಿಕೊಂಡರೆ, ಪಾದಚಾರಿಗಳಾದ ಮನೀಶ್ ಹಾಗೂ ಸಂದೀಪ್ ಕಚ್ಚಾ ರಸ್ತೆಗೆ ಬಿದ್ದು ಸಣ್ಣಪುಟ್ಟ ಗಾಯಗೊಂಡಿದ್ದರು.
ಸುದ್ದಿ ತಿಳಿದ ಸ್ಥಳೀಯುರು ಘಟನಾಸ್ಥಳಕ್ಕೆ ದೌಡಾಯಿಸಿ ಲಾರಿಯಡಿ ಸಿಲುಕಿದ್ದ ಮೂವರನ್ನು ಹರಸಾಹಸ ಪಟ್ಟು ಹೊರತೆಗೆದರು.ಈ ಪೈಕಿ ಗಂಭೀರಸ್ವರೂಪದ ಗಾಯಗೊಂಡಿದ್ದ ಕಾರ್ತಿಕ್ ಹಾಗು ಮತ್ತಿಬ್ಬರಿಗೆ ಪುಂಜಾಲಕಟ್ಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ ಆಸ್ಪತ್ರೆಗೆ ಸಾಗಿಸಲಾಗಿತ್ತು.ಈ ಸಂದರ್ಭ ಪರೀಕ್ಷಿಸಿದ ವೈದ್ಯರು ಕಾರ್ತಿಕ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿಕೇಸು ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.