ಮಂಗಳೂರು: ಇಂದಿನಿಂದ ಕುಕ್ಕೆಸುಬ್ರಹ್ಮಣ್ಯದಲ್ಲಿ ಮಡೆ ಮಡೆ ಸ್ನಾನ ಆರಂಭವಾಗಲಿದೆ. ಈಗಾಗಲೇ ಕುಕ್ಕೆ ಸುಬ್ರಮಣ್ಯಕ್ಕೆ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿದ್ದಾರೆ.
ಆದರೆ, ಮಡೆ ಮಡೆಸ್ನಾನ ಒಂದು ಅನಿಷ್ಠ ಪದ್ಧತಿ. ಈ ಪದ್ಧತಿಯ ಮುಂದುವರಿಕೆಗೆ ಹೈಕೋರ್ಟ್ ನೀಡಿರುವ ಆದೇಶದಿಂದ ನೋವಾಗಿದೆ. ನಾಲ್ಕು ವರ್ಷದ ನಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಮಡೆ ಮಡೆಸ್ನಾನ ವಿರೋಧಿ ಹೋರಾಟಗಾರ ಕೆ.ಶಿವರಾಂ ವಿಷಾದ ವ್ಯಕ್ತಪಡಿಸಿದ್ದಾರೆ. ಇಂದಿನಿಂದ ನಡೆಯಲಿರುವ ಮಡೆ ಮಡೆಸ್ನಾನದ ವಿರುದ್ಧ ಹೋರಾಟ ಮಾಡುತ್ತೇವೆ ಅಂತಾ ತಿಳಿಸಿದ್ದಾರೆ. ಪ್ರಾಣ ತೆತ್ತಾದರೂ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.
ಇನ್ನೂ, ಸರ್ಕಾರದ ನಿಯಂತ್ರಣದಲ್ಲಿ ಇರುವ ದೇವಸ್ಥಾನದಲ್ಲಿ ಜಾತಿ ಆಧಾರಿತ ಊಟ ನೀಡುವ ಪಂಕ್ತಿ ಭೇದ ಜಾರಿಯಲ್ಲಿದೆ. ಇದನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ್ದಾರೆ. ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಮಠಾಧಿಪತಿಗಳ ನೇತೃತ್ವದಲ್ಲಿ ಸಾಂಕೇತಿಕ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

