ಮಾರ್ಚ್ 8ರಂದು ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದ ಶಿಲಾನ್ಯಾಸ
ಮೂಡುಬಿದಿರೆ: ಮಾರೂರು-ಹೊಸಂಗಡಿಯಲ್ಲಿ ನಾಲ್ಕೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮವನ್ನು ಉಡುಪಿ ಅದಮಾರು ಮಠದ ಶ್ರೀ ಈಶಪ್ರಿಯ ಸ್ವಾಮೀಜಿ ಮಾರ್ಚ್ 8ರಂದು ಬೆಳಗ್ಗೆ 10 ಗಂಟೆಗೆ ನೆರವೇರಿಸಲಿದ್ದಾರೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಶ್ರೀಪತಿ ಭಟ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸುಮಾರು 1200 ವರ್ಷಗಳ ಇತಿಹಾಸವಿರುವ ಗೋಪಾಲಕೃಷ್ಣ ದೇವಸ್ಥಾನವನ್ನು ಜೀಣೋದ್ಧಾರಗೊಳಿಸಿ ದೇವರನ್ನು ಪುನರ್‌ಪ್ರತಿಷ್ಠಾಪಿಸಿ ಬ್ರಹ್ಮಕಲಶೋತ್ಸವ ನಡೆಸುವ ಬಗ್ಗೆ ಸಿದ್ಧತಾ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ದೇವಸ್ಥಾನದ ಗರ್ಭಗುಡಿ, ತೀರ್ಥಮಂಟಪ ಹಾಗೂ ಸುತ್ತುಪೌಳಿಯನ್ನು ಶಿಲಾಮಯವಾಗಿ ನಿರ್ಮಿಸಲಾಗುವುದು. ದೇವಳದ ಮಾಗಣೆಗೆ ಸೇರಿದ 9 ಗ್ರಾಮಗಳಲ್ಲಿ ಈಗಾಗಲೇ ಗ್ರಾಮ ಸಮಿತಿಯನ್ನು ರಚಿಸಲಾಗಿದೆ ಎಂದರು.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ, ಶ್ರೀ ಕ್ಷೇತ್ರ ಕರಿಂಜೆ ಇಲ್ಲಿನ ಮುಕ್ತಾನಂದ ಸ್ವಾಮೀಜಿ ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿ ಮಾರೂರುಗುತ್ತು ಭೋಜ ಶೆಟ್ಟಿ, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಸುಧೀರ್ ಹೆಗ್ಡೆ ಬೈಲೂರು, ತೋಡಾರು ದಿವಾಕರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಸಂಪತ್ ಕುಮಾರ್, ಹೊಸಂಗಡಿ ಅರಮನೆಯ ಸುಕುಮಾರ್ ಶೆಟ್ಟಿ, ಜೀಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಅಸ್ರಣ್ಣರು, ಜತೆ ಕಾರ್ಯದರ್ಶಿ ಸುಶಾಂತ್ ಕರ್ಕೇರಾ ಸುದ್ದಿಗೋಷ್ಠಿಯಲ್ಲಿದ್ದರು.