ಮೂಡುಶೆಡ್ಡೆಯ ಬಡ ಕುಟುಂಬದ ಸುಶೀಲಾ ಶೆಟ್ಟಿ ಅವರಿಗೆ ನೂತನ ಮನೆಯ ಕೀಲಿಕೈ ಹಸ್ತಾಂತರ
ಕೈಕಂಬ:ಗುರುಪುರ ಬಂಟರ ಮಾತೃ ಸಂಘ(ರಿ) ಇದರ ವಸತಿರಹಿತರಿಗೆ ವಸತಿಯೊಂದಿಗೆ ಮನೆ ನಿರ್ಮಿಸಿ ಕೊಡುವ ಯೋಜನೆಯನಡಿ ಮೂಡುಶೆಡ್ಡೆಯ ಬಡ ಕುಟುಂಬದ ಸುಶೀಲಾ ಶೆಟ್ಟಿ ಅವರಿಗೆ ನಿರ್ಮಿಸಿ ಕೊಡಲಾದ ನೂತನ ಮನೆಯ ಕೀಲಿಕೈ ಹಾಗೂ ಶ್ರೀ ನಿತ್ಯಾನಂದ ಸ್ವಾಮಿಯ ಭಾವಚಿತ್ರವನ್ನು ಮಂಗಳವಾರ ಬಂಟರ ಸಂಘದ ಪದಾಧಿಕಾರಿಗಳು ಹಸ್ತಾಂತರಿಸಿದರು.
ಮನೆಯಲ್ಲಿ ಏರ್ಪಡಿಸಲಾದ ಸರಳ ಸಮಾರಂಭದಲ್ಲಿ ಬಂಟರ ಸಂಘದ ಅಧ್ಯಕ್ಷ ಸಂತೋಷ ಶೆಟ್ಟಿ ಹೊಸಲಕ್ಕೆ ಶೆಡ್ಡೆ ಅವರು ಮಾತನಾಡಿ, ಗುರುಪುರ ಬಂಟರ ಮಾತೃ ಸಂಘವು ಇದುವರೆಗೆ ಬಂಟ ಸಮಾಜದ ೧೦ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಟ್ಟಿದೆ. ಸಮಾಜದ ತೀರಾ ಬಡ ಕುಟುಂಬಗಳನ್ನು ಗುರುತಿಸಿ, ಅವರಿಗೆ ನೆರವು ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಭವಿಷ್ಯದಲ್ಲಿ ಈ ಮನೆಯ ಮಕ್ಕಳಿಂದ ಸಮಾಜಕ್ಕೆ ಉತ್ತಮ ಸೇವೆ ಸಲ್ಲುವಂತಾಗಲಿ ಎಂದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಉಮೇಶ್ ರೈ ಪದವು ಮೇಗಿನಮನೆ ಮಾತನಾಡಿ, ಇದೊಂದು ಉತ್ತಮ ಕೆಲಸ. ಕುಟುಂಬಕ್ಕೆ ಆಸರೆಯಾಗುವುದು ದೇವರು ಮೆಚ್ಚುವ ಕೆಲಸ. ಈ ಮನೆ ಬೆಳಗಲಿ, ಸಂಘಕ್ಕೆ ಇನ್ನಷ್ಟು ಬಲ ಬರಲಿ ಎಂದು ಹಾರೈಸಿದರು.
ಸಂಘದ ಮಾಜಿ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಮಾತನಾಡಿ, ಹೊಸ ಮನೆ ನಿರ್ಮಾಣದ ಹಿಂದೆ ಪುಣೆ, ಬೆಂಗಳೂರು ಬಂಟರ ಸಂಘ ಹಾಗೂ ಜಾಗತಿಕ ಬಂಟರ ಸಂಘ, ಬಂಟ್ಸ್ ವೆಲ್ಫೇರ್ ಟ್ರಸ್ಟ್, ಸುಶೀಲಾ ಶೆಟ್ಟಿ ಕುಟುಂಬ, ಸಮಾಜದ ಗಣ್ಯರ ಸಹಿತ ಎಲ್ಲರ ಸಹಭಾಗಿತ್ವವಿದೆ. ಇದು ಸಂಘದ ನಿರಂತರ ಪ್ರಯತ್ನ ಎಂದರು.
ಸಂಘದ ಪದಾಧಿಕಾರಿ ಸುದರ್ಶನ ಶೆಟ್ಟಿ ಪೆರ್ಮಂಕಿ ಪ್ರಸ್ತಾವಿಸಿದರು. ಉಮೇಶ್ ಶೆಟ್ಟಿ ಹೊಸಲಕ್ಕೆ ಶೆಡ್ಡೆ ಅವರು ಸುಶೀಲಾ ಶೆಟ್ಟಿ ಕುಟುಂಬಕ್ಕೆ ಶುಭ ಹಾರೈಸಿದರು.
ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾಕ್ಷಿ ಶೆಟ್ಟಿ ಗಂಜಿಮಠ, ಸಂಘದ ಉಪಾಧ್ಯಕ್ಷ ಪದಾಧಿಕಾರಿಗಳಾದ ಪ್ರವೀಣ್ ಶೆಟ್ಟಿ ಕಡೆಗುಂಡ್ಯ, ಕಾರ್ಯದರ್ಶಿ ಹರೀಶ್ ಶೆಟ್ಟಿ ಉಪ್ಪುಗೂಡು, ನಾಗರಾಜ ರೈ ತಿಮಿರಿಗುತ್ತು, ನಳಿನಿ ಶೆಟ್ಟಿ ಗುರುಪುರ, ಜಯರಾಮ ರೈ ಉಳಾಯಿಬೆಟ್ಟು, ಉಳಾಯಿಬೆಟ್ಟು ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿಗುತ್ತು, ಮೂಡುಶೆಡ್ಡೆ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹರಿಪ್ರಸಾದ್ ಶೆಟ್ಟಿ ಹಾಗೂ ಜಯರಾಮ ರೈ ವಾಮಂಜೂರು, ಲತಾ ರೈ, ಈರಪ್ಪ ಮತ್ತಿತರರು ಉಪಸ್ಥಿತರಿದ್ದರು.