ಮೂಡುಬಿದರೆ: ಪುರಸಭೆಯ ನೇತೃತ್ವದಲ್ಲಿ ಸ್ವಚ್ಛ ಮೂಡುಬಿದರೆಗಾಗಿ ಜಾಗೃತಿ ಅಭಿಯಾನವು ಪದ್ಮಾವತಿ ಕಲಾಮಂದಿರದಲ್ಲಿ ಶನಿವಾರ ನಡೆಯಿತು.
ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿ, ಕಸ ಸಂಗ್ರಹಣ ತೊಟ್ಟಿಯನ್ನು ಹಸ್ತಾಂತರಿಸಿ ಮಾತನಾಡಿ ನಮ್ಮ ಮನೆ, ಪರಿಸರದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಮೂಡುಬಿದರೆ ಪುರಸಭೆಯು ಕಳೆದ 2 ವರ್ಷಗಳಿಂದ ಸ್ವಚ್ಛತೆಯನ್ನು ಕಾಪಾಡುತ್ತಾ ಬರುತ್ತಿದ್ದು ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಗಮನವನ್ನು ನೀಡಿದರೆ ಸ್ವಚ್ಛ ಭಾರತದ ಕನಸು ನನಸಾಗಲು ಸಾಧ್ಯ. ಮುಂದಿನ ದಿನಗಳಲ್ಲಿ ಮೂಡುಬಿದರೆಯಲ್ಲಿರುವ ಘನತ್ಯಾಜ್ಯ ಘಟಕದಲ್ಲಿ ಬಯೋಗ್ಯಾಸನ್ನು ಉತ್ಪಾದಿಸುವ ಘಟಕವನ್ನು ಮಾಡಲಾಗುವುದು ಎಂದು ಹೇಳಿದರು.
ಮೂಡುಬಿದರೆಯಲ್ಲಿ ಬಯೋಗ್ಯಾಸ್ ಘಟಕ:ಸಚಿವ ಅಭಯಚಂದ್ರ


ಪುರಸಭಾಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮಂಗಳೂರು ಜನ ಶಿಕ್ಷಣ ಟ್ರಸ್ಟ್ನ ನಿರ್ದೇಶಕ ಕೃಷ್ಣ ಮೂಲ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸ್ವಚ್ಛತೆ ಅಗತ್ಯ. ಸ್ವಚ್ಛತೆಯ ಸಂಸ್ಕೃತಿ ಪ್ರತಿಯೊಬ್ಬರಲ್ಲಿ ಎಳವೆಯಲ್ಲಿಯೇ ಮೂಡಿ ಬರಬೇಕು. ಇತರ ರಾಷ್ಟ್ರಗಳು ಭಾರತವನ್ನು ಕೊಳಕು ರಾಷ್ಟ್ರವೆಂದು ಹೀಯಾಳಿಸುತ್ತಿವೆ ಇದಕ್ಕೆ ಮುಖ್ಯ ಕಾರಣ ನಮ್ಮ ದೇಶದಲ್ಲಿ ಶೇ.80 ರಷ್ಟು ಜನರಿಗೆ ಶೌಚಾಯಗಳಿಲ್ಲದೆ ಬಯಲು ಶೌಚವನ್ನು ಆಶ್ರಿಯಿಸಿರುವುದು ಎಂದು ಹೇಳಿದ ಅವರು ಮೂಡುಬಿದರೆ ಪುರಸಭೆಗೆ ಈಗಾಗಲೇ ಸ್ವಚ್ಛತೆಗೆ ಪ್ರಶಸ್ತಿಗಳು ಬಂದಿದೆ ಇನ್ನು ಮುಂದೆಯೂ ಸ್ಚಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಮೂಡುಬಿದರೆ ಪುರಸಭೆ ರಾಷ್ಟ್ರಕ್ಕೆ ಮಾದರಿಯಾಗುವಂತೆ ಮಾಡಬೇಕಾಗಿದೆ ಎಂದರು.
ಪುರಸಭಾ ಉಪಾಧ್ಯಕ್ಷೆ ಎಲಿಜಾ ಮಿನೇಜಸ್, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಬಶೀರ್, ಸದಸ್ಯರಾದ ರತ್ನಾಕರ ದೇವಾಡಿಗ, ಬಾಹುಬಲಿ ಪ್ರಸಾದ್, ವನಿತಾ, ಅನೀಫ್ ಅಲಂಗಾರು, ವನಿತಾ, ಅನಿಲ್ ಲೋಬೋ, ನಾಮನಿರ್ದೇಶಿತ ಸದಸ್ಯರಾದ ಉಮಾನಾಥ ದೇವಾಡಿಗ, ಕರೀಂ, ಆಲ್ವಿನ್ ಮಿನೇಜಸ್, ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕ್ ಮತ್ತಿತರಿದ್ದರು.
ಸದಸ್ಯ ಪಿ.ಕೆ.ಥೋಮಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪುರಸಭಾ ಕಂದಾಯ ನಿರೀಕ್ಷಕ ಧನಂಜಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಆರೋಗ್ಯ ನಿರೀಕ್ಷಕಿ ಇಂದು ವಂದಿಸಿದರು.
ಸಭಾ ಕಾರ್ಯಕ್ರಮದ ಮೊದಲು ಮೂಡುಬಿದರೆಯ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ವಚ್ಛತೆಯ ಬಗ್ಗೆ ಜಾಗೃತಿ ಜಾಥಾ ನಡೆಯಿತು.
