ಮಂಗಳೂರು: ಪ್ರೀತಿಗೆ ಜಾತಿ, ಧರ್ಮ ಇಲ್ಲ, ನೈಜ ಪ್ರೀತಿ ಕುರುಡು ಎಂಬುವುದನ್ನು ಉಳ್ಳಾಲದಲ್ಲಿ ನಡೆದ ಈ ಘಟನೆ ಸಾಬೀತುಪಡಿಸಿದೆ.

ಘಟನೆಯ ವಿವರ: ಕೋಟೆಕಾರು ನಿವಾಸಿ ಇನ್ಶಾ ಖಲೀಲ್(19) ಎಂಬಾಕೆ ನಗರದ ಸಂತ ಆಗ್ನೇಸ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಬಿಎಂ ಓದುತ್ತಿದ್ದು, ಇರಾ ನಿವಾಸಿ ವೃತ್ತಿಯಲ್ಲಿ ಬಸ್ ಕಂಡಕ್ಟರ್ ಆಗಿರುವ ಭರತ್ ರಾಜ್(28) ಎಂಬಾತನನ್ನು ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದಳೆನ್ನಲಾಗಿದೆ. ಭರತ್‍ರಾಜ್ ಮಂಗಳೂರು-ತಲಪಾಡಿ ನಡುವೆ ಸಂಚರಿಸುವ 42 ನಂಬ್ರದ ಸಿಟಿ ಬಸ್ಸಿನಲ್ಲಿ ನಿರ್ವಾಹಕನಾಗಿದ್ದು, ಇಬ್ಬರೂ ರಜಾದಿನಗಳಲ್ಲಿ ಜೊತೆಯಾಗಿಯೇ ಸುತ್ತಾಡುತ್ತಿದ್ದರು. ಆದರೆ ತಮ್ಮ ಪ್ರೇಮ ವಿಚಾರ ಮನೆಮಂದಿಗೆ ತಿಳಿಯದಂತೆ ಇನ್ಶಾ ಖಲೀಲ್ ಎಚ್ಚರಿಕೆ ವಹಿಸಿದ್ದಳು.
ಕಳೆದ ನ.19ರಂದು ಕಾಲೇಜಿಗೆಂದು ತೆರಳಿದ್ದ ಇನ್ಶಾ ಖಲೀಲ್ ಪ್ರೀತಿಸುತ್ತಿದ್ದ ಭರತ್ ರಾಜ್ ಜೊತೆ ನಾಪತ್ತೆಯಾಗಿದ್ದಾಳೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಅಂದೇ ಹೆತ್ತವರು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಇನ್ಶಾ ಯಾರೊಂದಿಗೆ ತೆರಳಿದ್ದಾಳೆ ಎನ್ನುವುದು ತಿಳಿಯದೆ ಪೊಲೀಸರು ಹುಡುಕಾಟ ಮುಂದುವರಿಸಿದ್ದರು.
ಇನ್ಶಾ ಹಾಗೂ ಭರತ್ ಹಿಂದೂ ಸಂಘಟನೆಗಳ ಪ್ರಮುಖರಲ್ಲಿ ತಮ್ಮ ಮದುವೆ ಮಾಡಿಸುವಂತೆ ಕೇಳಿಕೊಂಡಿದ್ದು, ಅದರಂತೆ ಮೈಸೂರಿನ ದೇವಸ್ಥಾನವೊಂದರಲ್ಲಿ ಹಿಂದೂ ಪದ್ಧತಿ ಪ್ರಕಾರ ಮದುವೆ ಮಾಡಿಸಿದ್ದಾರೆ ಎನ್ನಲಾಗಿದೆ. ಈ ವಿಚಾರ ಬಯಲಾಗುತ್ತಲೇ ಭರತ್ ರಾಜ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಅಪಹರಣ ದೂರು ದಾಖಲಾಗಿದೆ.
