ಲೈಂಗಿಕ ಕಿರುಕುಳದಿಂದ ವಿದ್ಯಾರ್ಥಿನಿ ಆತ್ಮಹತ್ಯೆ. ಆರೋಪಿ ಬಂಧನ
ಮೂಡುಬಿದಿರೆ: ಜೈನ ಪಪೂ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಅದೇ ಕಾಲೇಜಿನ ಮಾಜಿ ನೌಕರರೊಬ್ಬರ ಲೈಂಗಿಕ ಕಿರುಕುಳ ಕಾರಣ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿ ಫೊಕ್ಸೊ ಪ್ರಕರಣ ದಾಖಲಿಸಿದ್ದಾರೆ.

ಬಂಧಿತ ಆರೋಪಿ ಕೋಟೆ ಬಾಗಿಲಿನ ಶ್ರೀಧರ್ ಪುರಾಣಿಕ್ ಎಂದು ತಿಳಿದುಬಂದಿದೆ. ಪಡುಕೊಣಾಜೆ ಗ್ರಾಮದಲ್ಲಿ ತನ್ನ ಸಂಬoಧಿಕರ ಮನೆಯಲ್ಲಿದ್ದು ಕಾಲೇಜಿಗೆ ಹೋಗಿ ಬರುತ್ತಿದ್ದ ಬಾಲಕಿಗೆ ಮಂಗಳವಾರ ಕಿವಿ ನೋವು ಉಂಟಾಗಿ ಮನೆಗೆ ಹೋಗುತ್ತೇನೆ ಎಂದಿದ್ದಳು.
ಕಾಲೇಜಿನವರು ಮನೆಯವರಿಗೆ ವಿಷಯ ತಿಳಿಸಿದಾಗ ಪರಿಚಯಸ್ಥ ಪುರಾಣಿಕ್ ಜತೆ ಮನೆಗೆ ಕಳಿಹಿಸಿಕಕೊಡುವಂತೆ ಹೇಳಿದ್ದರೆನ್ನಾಗಿದೆ. ಕಾರಿನಲ್ಲಿ ಬರುವಾಗ ಆರೋಪಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದ್ದು ಮನೆ ಹತ್ತಿರ ಬಂದರೂ ಆಕೆಯನ್ನು ಕಾರಿನಿಂದ ಇಳಿಯಲು ಬಿಡಲಿಲ್ಲ ಎನ್ನಲಾಗಿದೆ. ಯುವತಿ ಹೆದರಿ ಕಾರಿನ ಬಾಗಿಲು ತೆರೆದು ಮನೆಗೆ ಹೋಗಿದ್ದಳೆನ್ನಲಾಗಿದೆ.
ಆದರೆ ನಡೆದ ವಿಷಯವನ್ನು ಆಕೆ ಮನೆಗೆ ತಿಳಿಸಿರಲಿಲ್ಲ. ಮರುದಿನ ಬೆಳಿಗ್ಗೆ ಮನೆ ಹತ್ತಿರದ ಹಾಡಿಯಲ್ಲಿ ಚೂಡಿದಾರದ ಶಾಲನ್ನು ಕುತ್ತಿಗೆಗೆ ಬಿಗಿದು ಇನ್ನೊಂದು ತುದಿಯನ್ನು ಮರಕ್ಕೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನಲಾಗಿದೆ. ಡೆತ್‌ನೋಟನ್‌ನಲ್ಲಿ ಆರೋಪಿಯ ಹೆಸರು ಬರೆದು ತನಗೆ ಲೈಂಗಿಕ ಕಿರುಕುಳವಾಗಿರುವುದನ್ನು ಉಲ್ಲೇಖಿಸಿದ್ದಾಳೆನ್ನಾಗಿದೆ. ಕಾರ್ಕಳ ಬೈಲೂರಿನವಳಾದ ಈಕೆ ದಲಿತ ಸಮುದಾಯಕ್ಕೆ ಸೇರಿದವಳಾಗಿದ್ದಾಳೆನ್ನಲಾಗಿದೆ.
ಮೃತ ಯುವತಿಯ ಚಿಕ್ಕಮ್ಮ ಆರೋಪಿ ಶ್ರೀಧರ್ ಪುರಾಣಿಕ್ ಮನೆಗೆ ಕೆಲಸಕ್ಕೆ ಹೋಗುತ್ತಿದ್ದರು. ಇದೇ ಪರಿಚಯದಲ್ಲಿ ಆರೋಪಿ ಯುವತಿಯನ್ನು ಮನೆಗೆ ಕಾರಿನಲ್ಲಿ ಕರೆದುಕೊಂಡು ಬಂದಿದ್ದ. ಶಾಲಾ ದಾಖಲಾತಿ ವೇಳೆ ಯುವತಿಯ ಫೀಸ್ ಕೂಡ ಆರೋಪಿ ಕಟ್ಟಿದ್ದ.
ಪಣಂಬೂರು ಎಸಿಪಿ ಮಹೇಶ್ ಕುಮಾರ್ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.