ಮಹಡಿಯಿಂದ ಬಿದ್ದು ಯುವಕ ಮೃತ್ಯು
ಮಂಗಳೂರು: ಯುವಕನೋರ್ವ ಆಕಸ್ಮಿಕವಾಗಿ ಮನೆಯ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಕುದ್ರೋಳಿಯ ಟಿಪ್ಪು ಸುಲ್ತಾನ್ ನಗರದಲ್ಲಿ ರಾತ್ರಿ ನಡೆದಿದೆ. ಕುದ್ರೋಳಿ ಸಮೀಪದ ಕಂಡತ್ ಪಳ್ಳಿ ಬಳಿಯ ಟಿ.ಕೆ.ಎಚ್. ಖಾದರ್ ಎಂಬವರ ಪುತ್ರ ಮುಹಮ್ಮದ್ ರಿಯಾಝ್ (33) ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ. ರಿಯಾಝ್ ಮನೆಯ ಮಹಡಿ ಹತ್ತಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ರಾತ್ರಿ 8.50ರ ಸುಮಾರಿಗೆ ರಿಯಾಝ್, ಸ್ನೇಹಿತನ ಮನೆಯಲ್ಲಿ ಇದ್ದಾಗ ಪಾರಿವಾಳ ಹಿಡಿಯಲು ಸ್ನೇಹಿತ ಪಕ್ಕದ ಕಟ್ಟಡದ ಸಂಧಿಯ ಮೂಲಕ ತೆರಳಿದ್ದಾರೆ. ಇದನ್ನು ನೋಡಿದ ರಿಯಾಝ್ ಕೂಡ ಅದೇ ಸಂಧಿಯನ್ನು ಗೋಡೆ ನೆರವಿನೊಂದಿಗೆ ದಾಟಲು ಪ್ರಯತ್ನಿಸಿದಾಗ ಕಾಲು ಜಾರಿ ಮೂರನೆ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ತಕ್ಷಣ ಅವರನ್ನು ಕೋಡಿಯಾಲ್ ಬೈಲ್ ಯೆನಪೋಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಎಲ್ ಎಲ್ ಬಿ ವ್ಯಾಸಂಗ ಮಾಡಿದ್ದ ರಿಯಾಝ್ ಇತ್ತೀಚೆಗೆ ತಂದೆಯ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಸ್ನೇಹಜೀವಿಯಾಗಿದ್ದ ರಿಯಾಝ್ ಎಲ್ಲರಿಗೂ ಬೇಕಾದ ಯುವಕನಾಗಿದ್ದ. ಕುದ್ರೋಳಿಯಲ್ಲಿ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿದ್ದ ಎಂದು ರಿಯಾಝ್ ನನ್ನು ಕಳೆದುಕೊಂಡ ಸ್ನೇಹಿತರು ಕಣ್ಣೀರಾದರು.
ತಂದೆ-ತಾಯಿ, ತಲಾ ಮೂವರು ಸಹೋದರರು, ಸಹೋದರಿಯರು, ಅಪಾರ ಬಂಧುಬಳಗವನ್ನು ರಿಯಾಝ್ ಅಗಲಿದ್ದಾರೆ. ಅವರ ಪ್ರಾರ್ಥಿವ ಶರೀರದ ಅಂತ್ಯಸಂಸ್ಕಾರ ಕುದ್ರೋಳಿ ಮೊಯಿದ್ದೀನ್ ಜುಮಾ ಮಸೀದಿ ಕಬರಸ್ತಾನದಲ್ಲಿ ಇಂದು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.