ಕಾಶ್ಮೀರಿ ಪಂಡಿತರ ಮೇಲೆ ಮುಂದುವರಿದ ದಾಳಿ- ಉಗ್ರರ ಗುಂಡಿಗೆ ಓರ್ವ ಬಲಿ
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಪಂಡಿತರ (Kashmiri Pandits) ಹತ್ಯೆ ಮುಂದುವರಿದಿದೆ. ಶನಿವಾರ ಶೋಪಿಯಾನ್ (Shopian) ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನನ್ನು ಉಗ್ರರು (Terrorists) ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಚೌಧರಿ ಗುಂಡ್ ಪ್ರದೇಶದ ನಿವಾಸಿಯಾಗಿದ್ದ ಪುರನ್ ಕ್ರಿಶನ್ ಭಟ್ ಮೇಲೆ ದಾಳಿ ನಡೆಸಲಾಯಿತು. ಕ್ರಿಶನ್ ನಿವಾಸದ ಬಳಿಯೇ ಈ ದಾಳಿ ನಡೆದಿದ್ದು, ಅವರನ್ನು ಶೋಪಿಯಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಕ್ರಿಶನ್ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಪುರನ್ ಕ್ರಿಶನ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರಿಗೆ 11 ಮಗಳು ಹಾಗೂ 8 ವರ್ಷದ ಮಗನಿದ್ದಾನೆ. ಹತ್ಯೆ ನಡೆದ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ದಾಳಿಕೋರರನ್ನು ಬೇಟೆಯಾಡಲು ಪ್ರಯತ್ನ ಆರಂಭಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಹತ್ಯೆಯ ಬೆನ್ನಲ್ಲೇ ಪಂಡಿತರು ಪ್ರತಿಭಟನೆ ನಡೆಸಿದ್ದಾರೆ, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಜಮ್ಮು-ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಈ ದಾಳಿಯನ್ನು ಖಂಡಿಸಿದೆ. ಸಂತ್ರಸ್ತೆಯ ಕುಟುಂಬಕ್ಕೆ ಸಾಂತ್ವನ ಹೇಳಿದೆ. ಆಗಸ್ಟ್ 16 ರಂದು ಶೋಪಿಯಾನ್‌ನ ಚೋಟಿಪೋರಾ ಪ್ರದೇಶದಲ್ಲಿದ್ದ ಸೇಬು ಹಣ್ಣಿನ ತೋಟದಲ್ಲಿ ಇಬ್ಬರು ಪಂಡಿತ ಸಹೋದರರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಓರ್ವ ಮೃತಪಟ್ಟು ಮತ್ತೋರ್ವ ಗಾಯಗೊಂಡಿದ್ದರು.