ಗ್ಯಾಂಬಿಯಾ ಮಕ್ಕಳ ಸಾವು ಪ್ರಕರಣ – ಕೆಮ್ಮಿನ ಸಿರಪ್‌ಗಳ ತನಿಖೆಗೆ ಜೈಶಂಕರ್ ಭರವಸೆ
ನವದೆಹಲಿ: ಭಾರತದ (India) ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್ ಜೈಶಂಕರ್ (Jaishankar) ಅವರು ಗ್ಯಾಂಬಿಯಾದ (Gambia) ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಮಮಾಡೌ ತಂಗರಾ (Dr. Mamadou Tangara) ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತದಲ್ಲಿ ತಯಾರಿಸಲಾದ 4 ಕೆಮ್ಮಿನ ಸಿರಪ್‌ಗಳಿಂದಾಗಿ (Cough Syrup) ಗ್ಯಾಂಬಿಯಾದ 66 ಮಕ್ಕಳು ಸಾವನ್ನಪ್ಪಿರುವ ಬಗ್ಗೆ ಜೈಶಂಕರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ತಯಾರಿಸಲಾದ ಕೆಮ್ಮು ಮತ್ತು ಶೀತದ ಸಿರಪ್‌ಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯನ್ನು ನೀಡಿ, ಇದನ್ನು ಸೇವಿಸಿದವರಲ್ಲಿ ಮೂತ್ರಪಿಂಡಗಳಲ್ಲಿ ಗಾಯಗಳು ಕಂಡುಬಂದಿದೆ. ಮಾತ್ರವಲ್ಲದೇ ಗ್ಯಾಂಬಿಯಾದ 66 ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿತ್ತು. ಈ ಬಗ್ಗೆ ಸತ್ಯವನ್ನು ಕಂಡುಹಿಡಿಯಲು ಸಂಬಂಧಿತ ಭಾರತೀಯ ಅಧಿಕಾರಿಗಳಿಂದ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ಜೈಶಂಕರ್ ಅವರು ತಂಗರಾ ಅವರಿಗೆ ಭರವಸೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್‌ನಲ್ಲಿ ತಿಳಿಸಿರುವ ಜೈಶಂಕರ್, ನಾವು ಗ್ಯಾಂಬಿಯಾದ ಎಫ್‌ಎಂ ಡಾ. ಮಮಡೌ ತಂಗರಾ ಅವರೊಂದಿಗೆ ಮಾತನಾಡಿದ್ದೇವೆ. ಈ ವೇಳೆ ಇತ್ತೀಚೆಗೆ ಚಿಕ್ಕ ಮಕ್ಕಳ ಸಾವಿನ ಬಗ್ಗೆ ನಮ್ಮ ಆಳವಾದ ಸಂತಾಪವನ್ನು ತಿಳಿಸಿದ್ದೇವೆ. ಸೂಕ್ತ ಅಧಿಕಾರಿಗಳಿಂದ ವಿಷಯವನ್ನು ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಒತ್ತಿ ಹೇಳಿದ್ದೇವೆ. ನಾವು ಸಂಪರ್ಕದಲ್ಲಿರಲು ಒಪ್ಪಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.